ನಗರದಲ್ಲಿ ರಸ್ತೆಗುಂಡಿಗಳ ಕಾರುಬಾರು

ಬೆಂಗಳೂರು, ಸೆ.೯- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೇ ರಸ್ತೆ ಗುಂಡಿಗಳ ಸಮಸ್ಯೆ ಉಲ್ಬಣಗೊಂಡಿದ್ದು, ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿದ್ದು, ಕಳೆದ ಹತ್ತು ದಿನಗಳಿಂದ ಸುರಿದ ಮಳೆಯೇ ಕಾರಣವಾಗಿದೆ.
ಮಳೆ ಮೊದಲೇ ಹದಗೆಟ್ಟಿದ್ದ ರಸ್ತೆಗಳನ್ನು ಸಾವಿನ ಗುಂಡಿ ಮಾಡಿದೆ. ಬೆಂಗಳೂರು ಪೂರ್ವ ವಲಯದ ಪ್ರವಾಹಕ್ಕೆ ರಸ್ತೆಗಳು ಕೊಚ್ಚಿಹೋಗಿದೆ.ಬೆಂಗಳೂರಿನ ೧೬,೦೦೦ ಕಿ.ಮೀ ಉದ್ದದ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವಾರದಲ್ಲೇ ೯ ಸಾವಿರಕ್ಕೂ ಹೆಚ್ಚು ಗುಂಡಿ ಸೃಷ್ಟಿಯಾಗಿದ್ದು, ಬಹುತೇಕ ಕಡೆಗಳಲ್ಲಿ ಮಳೆಯೂ ಸುರಿಯುತ್ತಿರುವುದರಿಂದ ಗುಂಡಿಗಳೆಲ್ಲಾ ನೀರು ತುಂಬಿ ಹೊಂಡಗಳಾಗಿವೆ.
ಇನ್ನೂ, ಕಳೆದೊಂದು ವಾರ ಸುರಿದ ಮಳೆಯಿಂದಾಗಿ ೧೬ ಸಾವಿರ ಕಿ.ಮೀ ಉದ್ದದ ರಸ್ತೆಯಲ್ಲಿ ಶೇ. ೬೦ ಭಾಗದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಹೀಗಾಗಿ ಈ ರಸ್ತೆ ದುರಸ್ತಿಗಾಗಿ ಬಿಬಿಎಂಪಿಗೆ ಕನಿಷ್ಠ ೩೦ ಕೋಟಿ ರೂ. ಅವಶ್ಯಕತೆಯಿದೆ.
ಒಟ್ಟಾರೆ, ಒಂದೆಡೆ ಮಳೆಯಿಂದಾಗಿ ನಗರದ ಬಹುತೇಕ ವಲಯದ ೫೦ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿ ಸಮಸ್ಯೆ ಉಂಟಾಗಿದೆ. ಅದರ ಜತೆಗೆ ಇದೀಗ ಮಳೆಯ ಪರಿಣಾಮ ನಗರದ ೧೪ ಸಾವಿರ ಕಿ.ಮೀ.ಉದ್ದದ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ಅವು ಗಳನ್ನು ಮುಚ್ಚುವುದು ಬಿಬಿಎಂಪಿಗೆ ಸವಾಲಾಗಿದೆ.