ನಗರದಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್: ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಮೈಸೂರು. ಏ.7: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟ ಇಂದು ಕರೆ ನೀಡಿದ ಮುಷ್ಕರಕ್ಕೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ನಿನ್ನೆ ಸಂಜೆಯಿಂದಲೇ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಸಂಚಾರ ಕಡಿಮೆಯಾಗಿ ರಾಜ್ಯ ರಸ್ತೆ ಸಾರಿಗೆ ಬಸ್‍ಗಳನ್ನೇ ನೆಚ್ಚಿಕೊಂಡವರು ಪರದಾಡುವಂತಾಗಿತ್ತು. ಇಂದು ಬಸ್ ನಿಲ್ದಾಣ ಸರ್ಕಾರದ್ದು, ನಿಂತಿರೋದು ಮಾತ್ರ ಖಾಸಗಿ ಬಸ್‍ಗಳು ಎನ್ನುವಂತಾಗಿತ್ತು. ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಿಗ್ಗೆಯಿಂದ ಡಿಪೆÇೀದಿಂದ ಒಂದೇ ಒಂದು ಬಸ್‍ಗಳು ಹೊರಗಡೆ ಬಂದಿಲ್ಲ. ಪೆÇಲೀಸರು ಕೂಡ ಬಸ್ ನಿಲ್ದಾಣಗಳಲ್ಲಿಯೇ ಬೀಡುಬಿಟ್ಟಿದ್ದಾರೆ. ಪೆÇಲೀಸ್ ಭದ್ರತೆಯಲ್ಲಿ ಖಾಸಗಿ ಬಸ್ ಗಳು ಸಂಚಾರ ನಡೆಸಿವೆ. ಸಬರ್‍ಬನ್ ಬಸ್ ನಿಲ್ದಾಣದ ಮುಂದೆ ಖಾಸಗಿ ಬಸ್‍ಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಮೈಸೂರಿನಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಗೆ ಖಾಸಗಿ ಬಸ್ ಸೇವೆ ನಡೆಯುತ್ತಿದೆ.
ಮೈಸೂರು ಗ್ರಾಮಾಂತರ ಹಾಗೂ ನಗರ ಭಾಗದ ಸಾರಿಗೆ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನಗರ ಭಾಗದ 370, ಗ್ರಾಮಾಂತರ ಭಾಗದ 635 ಬಸ್‍ಗಳ ಸೇವೆ ಸ್ಥಗಿತಗೊಂಡಿದೆ. ಒಟ್ಟು 5000 ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಮೈಸೂರು ಜಿಲ್ಲೆಯ 7 ಡಿಪೆÇೀಗಳಲ್ಲಿ ಬಸ್‍ಗಳು ನಿಂತಿವೆ.
ಸಾರಿಗೆ ನೌಕರರ ಮುಷ್ಕರದ ಬಿಸಿ ಸಾರಿಗೆ ಬಸ್‍ಗಳನ್ನೇ ನೆಚ್ಚಿಕೊಂಡಿದ್ದ ಪ್ರಯಾಣಿಕರಿಗೆ ತಟ್ಟಿದೆ. ಬೆಳಿಗ್ಗೆ ಮೈಸೂರು ನಗರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ನಗರ ಸಾರಿಗೆಗೆ ಪರ್ಯಾಯ ವ್ಯವಸ್ಥೆ ಸಿಗದ ಕಾರಣ ಅಧಿಕಾರಿಗಳು ಬೇರೆ ಜಿಲ್ಲೆಗಳಿಗೆ ಖಾಸಗಿ ಬಸ್ ವ್ಯವಸ್ಥೆ ಮಾಡಿದ್ದಾರೆ. ಇಂದು ಪದವಿ ಪರೀಕ್ಷೆಗಳು ಇರುವ ಕಾರಣ ನಗರ ಸಾರಿಗೆ ಬಸ್‍ಗಳಿಲ್ಲದೆ ಸಮಸ್ಯೆ ಉದ್ಭವಿಸಿದೆ.
ಮೈಸೂರಿನ ಗ್ರಾಮಾಂತರ ಡಿಟಿಓ ಹೇಮಂತ್ ಕುಮಾರ್ ಪ್ರತಿಕ್ರಿಯಿಸಿ ಕೊನೆ ಕ್ಷಣದವರೆಗೆ ನಮ್ಮ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದೆವು. ಅವರು ಒಪ್ಪದ ಕಾರಣ ಖಾಸಗಿ ಬಸ್ ಮೂಲಕ ಜನರಿಗೆ ಸೇವೆ ನೀಡುತ್ತಿದ್ದೇವೆ. ಸರ್ಕಾರಿ ದರದಲ್ಲೇ ಸೇವೆ ನೀಡುತ್ತಿದ್ದೇವೆ. ಪ್ರಮುಖ ಮಾರ್ಗಗಳಿಗೆ ಸಂಚಾರಕ್ಕಾಗಿ ಖಾಸಗಿ ಬಸ್ ಓಡಿಸಲಾಗುತ್ತಿದೆ. ಮುಷ್ಕರದ ಬಗ್ಗೆ ಹಿರಿಯ ಅಧಿಕಾರಿಗಳು ಏನು ಹೇಳುತ್ತಾರೆ ಅದನ್ನೇ ಅನುಸರಿಸುತ್ತೇವೆ. ಅಗತ್ಯ ಇರುವ ಕಡೆಗಳಿಗೆ ಖಾಸಗಿ ಬಸ್ ಸಂಚಾರ ಮಾಡುತ್ತಿವೆ. ಹೊರರಾಜ್ಯದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತಿಳಿಸಿದರು.
ಹೆಸರಿಗೆ ಮಾತ್ರ ಸರ್ಕಾರಿ ದರ, ಆದರೆ ಸಾರ್ವಜನಿಕರಿಂದ ಸುಲಿಗೆ ನಡೆಯುತ್ತಿದೆ. ಮೈಸೂರಿನಲ್ಲಿ ಖಾಸಗಿ ಬಸ್ ಗಳ ದರ್ಬಾರ್‍ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೆ.ಆರ್.ಪೇಟೆಗೆ 60ರೂ. ದರಕ್ಕೆ 100ರೂ ವಸೂಲಿ ಮಾಡಲಾಗುತ್ತಿದೆ. ಊಟಿಗೆ 150ರ ದರಕ್ಕೆ 300ರೂ ವಸೂಲಿ ಮಾಡಲಾಗುತ್ತಿದೆ. ಅಂತರ್ ರಾಜ್ಯಕ್ಕೆ ಬಸ್‍ಗಳೂ ಸಹ ಇಲ್ಲ. ಅಂತರ್ ರಾಜ್ಯಕ್ಕೆ ಪರ್ಮಿಟ್ ಟ್ಯಾಕ್ಸ್ ಕಟ್ಟಬೇಕಾದ ಹಿನ್ನಲೆಯಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಸಂಚರಿಸಲು ಖಾಸಗಿ ಬಸ್‍ಗಳು ಹಿಂದೇಟು ಹಾಕುತ್ತಿವೆ.
ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿಲ್ದಾಣಕ್ಕೆ ಬಂದು ಆರ್.ಟಿ.ಓ ಅಧಿಕಾರಿ ದೀಪಕ್ ಪರಿಶೀಲನೆ ನಡೆಸಿದರು. ಖಾಸಗಿ ಬಸ್ ಗಳ ಪರ್ಮಿಟ್ ಪರಿಶೀಲನೆ ನಡೆಸಿದರು. ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಖಾಸಗಿ ಬಸ್‍ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ. ದರದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸರ್ಕಾರಿ ದರವನ್ನೇ ನಿಗದಿ ಮಾಡಲಾಗಿದೆ. ಹೆಚ್ಚು ಹಣ ವಸೂಲಿ ಮಾಡೋದು ಗಮನಕ್ಕೆ ಬಂದಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು. ಇಂದಿನಿಂದ ಮುಷ್ಕರ ಮುಗಿಯುವವರೆಗೂ ಖಾಸಗಿ ಬಸ್ ಗಳಿಗೆ ತುರ್ತು ಪರ್ಮಿಟ್ ನೀಡಲಾಗಿದೆ. ಅವಶ್ಯಕತೆ ಬಿದ್ದರೆ ಬಸ್‍ಗಳ ದಾಖಲಾತಿ ಪರಿಶೀಲಿಸಿ ಸಂಖ್ಯೆ ಹೆಚ್ಚಿಸುತ್ತೇವೆ ಎಂದರು.
ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ನೌಕರರ ಹಗ್ಗಜಗ್ಗಾಟದಿಂದ ಪ್ರಯಾಣಿಕರು ಇನ್ನಿಲ್ಲದ ಪಾಡು ಪಡುವಂತಾಗಿದೆ. ಕೊರೋನಾ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜನಸಾಮಾನ್ಯರು ಸಾರಿಗೆ ಬಸ್ ಮುಷ್ಕರದಿಂದ ಹಿಡಿಶಾಪ ಹಾಕುತ್ತಿದ್ದಾರೆ.