ನಗರದಲ್ಲಿ ಮೇಣದ ಬತ್ತಿ ಹಿಡಿದು ಮತದಾನ ಜಾಗೃತಿ

ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೬- ಲೋಕಸಭಾ ಚುನಾವಣೆಯ ಪ್ರಯುಕ್ತ ತಾಲ್ಲೂಕ ಸ್ವೀಪ್ ಸಮಿತಿ, ತಾಲ್ಲೂಕಾಡಳಿತ, ತಾಲೂಕ ಪಂಚಾಯತ್ ಹಾಗೂ ನಗರಸಭೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಕ್ಯಾಂಡೆಲ್ ಮಾರ್ಚ್ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಿನ್ನೆ ಸಂಜೆ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಚುನಾವಣಾ ಅಧಿಕಾರಿಗಳಾದ ಮಹೇಶ ಪೋತದಾರ್ ಉದ್ಘಾಟಿಸಿ ಮಾತನಾಡಿ ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಯಾವುದೇ ಆಸೆ ಆಮಿಷೆಗಳಿಗೆ ಬಲಿಯಾಗದೆ ಸಧೃಡ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡಬೇಕೆಂದರು.
ತಹಶಿಲ್ದಾರ ಅರುಣ್ ಕುಮಾರ್ ದೇಸಾಯಿ ಮಾತನಾಡಿ ‘ಚುನಾವಣೆ ಪರ್ವ ದೇಶದ ಗರ್ವ’ಎಂಬ ಧ್ಯೇಯ ವಾಕ್ಯ ದೊಂದಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆಗಳು ದೇಶದಲ್ಲಿ ಪ್ರಾರಂಭವಾಗಿದ್ದು ಸರ್ವರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಸ್ತುತ ಸಾಲಿನಲ್ಲಿ ಶೇ ೮೦% ಕ್ಕೂ ಅಧಿಕ ಮತ ಚಲಾವಣೆ ನಮ್ಮ ಗುರಿಯಾಗಿದ್ದು ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂದರು.
ಪೌರಾಯುಕ್ತರಾದ ಮಂಜುನಾಥ ಗುಂಡೂರ್ ಮಾತನಾಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ರಾಯಚೂರು ಹಾಗೂ ನಗರಸಭೆ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಗರ ವ್ಯಾಪ್ತಿಯ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಹಾಗೂ ಶಕ್ತಿಶಾಲಿ ಪ್ರಜಾಪ್ರಭುತ್ವಕ್ಕಾಗಿ ತಪ್ಪದೆ ಮತದಾನ ಮಾಡಬೇಕು ಮತ ಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದ್ದು ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಿ ದೇಶದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ನೂರಾರು ಅಧಿಕಾರಿಗಳು ತಮ್ಮ ಕೈಯಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸುತ್ತಾ ಮತದಾನ ಜಾಗೃತಿ ಮಾಡಿದ್ದು ವಿಶೇಷವಾಗಿತ್ತು.
ಕ್ಯಾಂಡೆಲ್ ಮಾರ್ಚ್ ತಹಶಿಲ್ದಾರರ ಕಾರ್ಯಾಲಯದಿಂದ ಪ್ರಾರಂಭವಾಗಿ ಬಸವ ವೃತ್ತದವರೆಗೆ ಸಾಗಿ ಪುನ: ಮಹಾತ್ಮ ಗಾಂಧಿ ವೃತ್ತಕ್ಕೆ “ಮತದಾನ ಬೆಳಗು” ಎಂಬ ಧ್ಯೇಯ ದೊಂದಿಗೆ ಜರುಗಿತು, ಈಗಾಗಲೇ ಪ್ರತಿ ದಿನ
ನಗರಸಭೆಯು ಪ್ರತಿಯೊಂದು ವಾರ್ಡ್‌ಗಳಲ್ಲಿ ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಮತದಾನ ಜಾಗೃತಿ ಸಂದೇಶಗಳನ್ನು ಹರಡುತ್ತಿದ್ದು ಸರ್ವ ನಾಗರಿಕರು ಮತದಾನ ಮಾಡುವಂತೆ ಪ್ರೆರೆಪಿಸುತ್ತಿದ್ದು ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ದೇಶದ ಹಬ್ಬವನ್ನು ಯಶಸ್ವಿ ಗೊಳಿಸಬೇಕಿದೆ.
ಈ ಸಂದರ್ಭದಲ್ಲಿ ತಾಪಂ ಇಒ ವೀರಣ್ಣ ಕೆ, ಅಂಬಾದಾಸ್, ಚಂದ್ರಶೇಖರ ಹಿರೇಮಠ, ಲಿಂಗರಾಜ ಹೂಗಾರ, ಅಮರಗುಂಡಪ್ಪ, ಕಿಶನ್ ರಾವ್, ಪಿಡಿಒ ಮಹ್ಮದ್ ಹನೀಫ್, ವೀರಭದ್ರಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.