ನಗರದಲ್ಲಿ ಮತ್ತೇ ಲಾಕ್‌ಡೌನ್ ಗೌರವ್ ಗುಪ್ತಾ ಸುಳಿವು

ಬೆಂಗಳೂರು, ಡಿ.೩- ಒಮಿಕ್ರಾನ್ ಸೋಂಕು ದ್ವಿಗುಣಗೊಂಡರೆ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಹಂತಹಂತವಾಗಿ ರಾಜಧಾನಿ ಬೆಂಗಳೂರು ನಗರವನ್ನು ಮತ್ತೊಮ್ಮೆ ’ಲಾಕ್ ಡೌನ್’ ಜಾರಿಗೊಳಿಸುವುದಾಗಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸುಳಿವು ನೀಡಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಕೋವಿಡ್ ಸೋಂಕು, ಒಮಿಕ್ರಾನ್ ಪತ್ತೆ ಹಿನ್ನೆಲೆ ಜನರು ಎಚ್ಚರದಿಂದ ಇರಬೇಕು. ಸಾಮಾಜಿಕ ಅಂತರ, ಮಾಸ್ಕ್ ಪಾಲನೆ ಕಡ್ಡಾಯಗೊಳಿಸಬೇಕು. ಜೊತೆಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು, ಇಲ್ಲವಾದರೆ ಹಿಂದಿನ ಇತಿಹಾಸ ಮರುಕಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಸೋಂಕು ಹರಡುವ ಪ್ರಮಾಣ ತಗ್ಗಿಸಲು, ನಾಗರೀಕರ ಆರೋಗ್ಯ ಹಿತಾಸಕ್ತಿ ದೃಷ್ಟಿಯಿಂದ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಗೊಳಿಸುವುದು ಅಗತ್ಯವಾಗಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ನಿಯಮ ಪಾಲನೆಯೂ ಅಗತ್ಯ.
ಯಾವ ಮಾರ್ಗಸೂಚಿ, ನಿಯಮ ಅನ್ ಲಾಕ್ ಆಗಿದೆಯೋ, ಅದನ್ನು ಹಂತಹಂತವಾಗಿ ಮತ್ತೆ ಚಾಲ್ತಿಗೆ ಬರಲಿವೆ ಎಂದು ಮತ್ತೆ ಲಾಕ್‌ಡೌನ್ ಸುಳಿವು ನೀಡಿದರು.

೮ ದಿನದಲ್ಲೇ ಫಲಿತಾಂಶ:
ಈ ಹಿಂದೆ ಕೋವಿಡ್ ಪಾಸಿಟಿವ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ ಒಳಪಡಿಸಿ, ಫಲಿತಾಂಶ ಪಡೆಯಲು ಎರಡು – ಮೂರು ತಿಂಗಳು ಬೇಕಾಗಿತ್ತು. ಆದರೆ ಇದೀಗ ವೇಗವಾಗಿ ಜಿನೋಮ್ ಪರೀಕ್ಷೆಯ ಫಲಿತಾಂಶ ಪಡೆಯಬಹುದಾಗಿದ್ದು, ಎಂಟು ದಿನಗಳಲ್ಲಿ ಫಲಿತಾಂಶ ಕೈಸೇರುವ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ತಿಳಿಸಿದರು.

ನಾವು ಪ್ರತಿದಿನ ಬೆಂಗಳೂರಿನಲ್ಲಿ ೧೦ ರಿಂದ ೧೫ ಸ್ಯಾಂಪಲ್‌ಗಳನ್ನು ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗುತ್ತಿದೆ. ಇದರಿಂದ ಒಮಿಕ್ರಾನ್ ಸೋಂಕು ಸಹ ಪತ್ತೆಹಚ್ಚಬಹುದಾಗಿದೆ ಎಂದು ಗೌರವ್ ಗುಪ್ತ ಹೇಳಿದರು.

ಮಹಾನಗರ ಪಾಲಿಕೆಯಲ್ಲಿ ಮೊದಲಿನಿಂದ ಕೊರೊನಾ ಸೋಂಕಿತರ ಮೇಲೆ ನಿಗಾ ಇರಿಸಿದ್ದೇವೆ. ಪರೀಕ್ಷೆ, ಲಸಿಕೆ ಹಾಗೂ ಸೋಂಕಿತರ ಪತ್ತೆ ಮಾಡುವಂತಹ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ವಿದೇಶಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದ ಅವರು, ಇಂತಹ ಒಂದು ಸನ್ನಿವೇಶ ಬರಬಹುದು ಎಂದು ನಾವು ಮೊದಲಿನಿಂದ ತಯಾರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬರುವ ಸಲಹೆ – ಸೂಚನೆಗಳನ್ನು ಪಾಲನೆ ಮಾಡುತ್ತಿದ್ದು, ಇಂದು ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಬರುವ ಸೂಚನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಆಫ್ರಿಕಾ ಪ್ರಜೆಗಳ ಪತ್ತೆಗೆ ಕಾರ್ಯಾಚರಣೆ

ಬೆಂಗಳೂರಿಗೆ ಆಗಮಿಸುವ ದಕ್ಷಿಣ ಆಫ್ರಿಕಾ ಪ್ರಜೆಗಳ ಮೇಲೆ ಬಿಬಿಎಂಪಿ ವಿಶೇಷ ನಿಗಾ ಇಟ್ಟಿದೆ. ಅದರಲ್ಲೂ, ಕ್ವಾರಂಟೈನ್ ಆಗದೆ, ಓಡಾಡುವ ಪ್ರಜೆಗಳ ಪತ್ತೆಗೆ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.

ಆರಂಭದಲ್ಲಿ ಏನೇನು ಬಂದ್

  • ನೈಟ್ ಕರ್ಫ್ಯೂ ಜಾರಿ ಸಾಧ್ಯತೆ.
  • ಬೆಂಗಳೂರಿನಲ್ಲಿ ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ನಿಬಂಧನೆ.
  • ಮಾಲ್, ಚಿತ್ರಮಂದಿರಗಳಲ್ಲಿ ಶೇ. ೫೦ ರಷ್ಟು ಮಾತ್ರ ಭರ್ತಿ
  • ಕಲ್ಯಾಣ ಮಂಟಪಗಳಲ್ಲಿ ಸಭೆ – ಸಮಾರಂಭಗಳಲ್ಲಿ ಜನಸ್ತೋಮಕ್ಕೆ ನಿಯಮ.
  • ಈಜುಕೊಳ, ಪಾರ್ಕ್ ಬಂದ್ ಸಾಧ್ಯತೆ.