ನಗರದಲ್ಲಿ ಭಾರೀ ಮಳೆ ನಾಗರಿಕರ ಪರದಾಟ

೫ ದಿನ ಮಳೆ

ಬೆಂಗಳೂರು, ಸೆ.೧- ರಾಜಧಾನಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಮನೆ, ಕಟ್ಟಡಗಳಿಂದ ನೀರು ಹೊರಗಡೆ ಹಾಕಲು ಜನರು ಹರಸಾಹಸ ಪಡುವಂತಾಯಿತು. ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ನಗರದ ತಗ್ಗು ಪ್ರದೇಶದಲ್ಲಿರುವ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ವಾರ್ಡಿನ ಉದ್ಯಾನವನಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಮನೆಗಳಿಗೆಲ್ಲ ನೀರು ನುಗ್ಗಿದೆ. ಏಕಾಏಕಿ ನುಗ್ಗಿದ ರಾಜ ಕಾಲುವೆಯ ನೀರಿನಿಂದಾಗಿ ಗಾಬರಿಬಿದ್ದ ಜನ ನೀರು ಮನೆಯಿಂದ ಹೊರಗಡೆ ಹಾಕಲು ಹರಸಾಹಸ ನಡೆಸಿದರು. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಯಿತು.ಪ್ರಮುಖವಾಗಿ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹೆಬ್ಬಾಳ, ಸಂಪಗಿರಾಮನಗರ, ಗೋರಗುಂಟೆ ಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ, ಶಾಂತಿನಗರ ಬೊಮ್ಮಸಂದ್ರ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದ್ದು,
ಬಿಬಿಎಂಪಿ ಸಿಬ್ಬಂದಿಗಳು ನೀರು ಹೊರ ಹಾಕಲು ಮೋಟರ್ ಗಳನ್ನ ಬಳಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಳೆಯಿಂದ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಗಳಂತೆ ಆಗಿದ್ದು, ಶೇಷಾದ್ರಿಪುರಂ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ ಒಂದು ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿತ್ತು. ಭದ್ರಪ್ಪ ಲೇಔಟ್ ನ ರೈಲ್ವೇ ಅಂಡರ್ ಪಾಸ್‌ನಲ್ಲಿ ಆಟೋ ಒಂದು ಮುಳುಗಿ ನಿಂತಿತ್ತು. ಜೊತೆಗೆ ಬೆಂಗಳೂರಿನ ಹಲವೆಡೆ ಮರಗಳು ಧರೆಗೆ ಉರುಳಿದಿವೆ.
ಮನೆಯ ಸಾಮಗ್ರಿ ಹಾಗೂ ಪೀಠೋಪಕರಣಗಳು ನೀರಿನಲ್ಲಿ ತೇಲಾಡಿವೆ. ವೃದ್ಧರು, ಮಕ್ಕಳು ನೀರಿನಲ್ಲಿ ಸಾಗಿ ಸುರಕ್ಷಿತ ಸ್ಥಳಕ್ಕೆ ತಲುಪಿದರು. ಕಾಲುವೆಗಳು ಹೂಳು ತುಂಬಿಕೊಂಡಿವೆ. ಧಾರಾಕಾರ ಮಳೆ ಆಗಿದ್ದರಿಂದ, ನೀರು ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಮನೆಗಳಿಗೆ ದೂರು ಬರುತ್ತಿದ್ದಂತೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಹಿಸಲಾಗಿದೆ. ಯಾವುದೇ ಅನಾಹುತ ನಡೆದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.
ಚಿಕ್ಕಪೇಟೆ, ಕಾಟನ್‌ಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಉಪ್ಪಾರಪೇಟೆ, ಓಕಳಿಪುರ, ಮಲ್ಲೇಶ್ವರ, ಯಶವಂತಪುರ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶಗಳ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ಲಿ, ಎಷ್ಟು ಮಳೆ..!
ಬೆಂಗಳೂರು ನಗರದಲ್ಲಿ ಸರಾಸರಿ ಮಾಸಿಕ ಒಟ್ಟು ಮಳೆ ೧೬೨.೭ ಮಿಮೀ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ೧೩೩.೬ ಮಿಮೀ. ಇದೆ. ಬೆಂಗಳೂರು ನಗರದಲ್ಲಿ ರಾತ್ರಿ ಮೂರು ಗಂಟೆಗಳಲ್ಲಿ ೬೪.೮ ಮಿಮೀ ಮಳೆ ದಾಖಲಾಗಿದೆ. ರಾತ್ರಿ ೧೧.೩೦ರಿಂದ ಮೂರು ಗಂಟೆಗಳಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ೫೨ ಮಿ.ಮೀ. ಮಳೆ ಸುರಿದಿದೆ.

ರಾಯರ ಮಠ ಜಲಾವೃತ..!
ರಾತ್ರಿ ಸುರಿದ ಮಳೆಗೆ ಮಲ್ಲೇಶ್ವರಂ ನಲ್ಲಿರುವ ರಾಯರ ಮಠದಲ್ಲಿ ಮೊಣಕಾಲಿನವರೆಗೂ ನೀರು ತುಂಬಿಕೊಂಡಿತ್ತು. ಗುರುವಾರ ವಿಶೇಷ ಪೂಜೆ ನಡೆಯುತ್ತಿದ್ದಾಗಲೇ ದೇವಾಲಯ ಒಳಗೆ ನೀರು ನುಗ್ಗಿದು, ಇದನ್ನು ತೆರವುಗೊಳಿಸಲು ಅರ್ಚಕರು ಪರದಾಡಿದರು.