ನಗರದಲ್ಲಿ ನೀರಿನ ಸಮಸ್ಯೆಗೆ ಪರಿಹಾರಕ್ಕೆ ಕ್ರಮ-ಗಾಯಿತ್ರಿ

ಗೌರಿಬಿದನೂರು.ನ೬: ನಗರದ ಕಿಂಡಿ ಅಣೆಕಟ್ಟು ಸೇರಿದಂತೆ ತಾಲ್ಲೂಕಿನ ೬ ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಅನುಷ್ಠಾನಕ್ಕೆ ತಂದಿರುವ ಎಚ್.ಎನ್. ವ್ಯಾಲಿ ಯೋಜನೆಯ ಪೈಪ್ ಲೈನ್ ಕಾಮಗಾರಿಯನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಕೆರೆಯ ಮೂಲಕ ಗೌರಿಬಿದನೂರಿಗೆ ಎಚ್.ಎನ್ ವ್ಯಾಲಿ ನೀರು ತಲುಪಿಸಲು ಈಗಾಗಲೇ ಸುಮಾರು ೮ ಕಿ.ಮೀ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿನ ಕಿಂಡಿ ಅಣೆಕಟ್ಟೆಯ ಸ್ಥಳದಿಂದ ಪೈಪ್ ಲೈನ್ ಜೋಡಿಸುವ ಕಾಮಗಾರಿ ಆರಂಭವಾಗಿದೆ. ಇದರಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಕಿಂಡಿ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ಗಣನೀಯವಾಗಿ ಏರಿಯಾಗಿ ಮುಂದಿನ ಬೇಸಿಗೆಗೆ ನಗರದಲ್ಲಿ ನೀರಿನ ಬವಣೆ ತಪ್ಪಲಿದೆ. ಜತೆಗೆ ಈ ತಾಲ್ಲೂಕಿನ ೬ ಕೆರೆಗಳಿಗೆ ನೀರು ಹರಿಯುವುದರಿಂದ ಆ ಭಾಗದಲ್ಲಿನ ರೈತರ ಬೋರ್ ವೆಲ್ ಗಳು ಜಲ ಮರುಪೂರಣಗೊಂಡು ಬೇಸಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಮಾತನಾಡಿ, ನಗರಸಭೆಯ ವ್ಯಾಪ್ತಿಯು ವಿಸ್ತಾರವಾಗಿದ್ದು, ಜನಸಾಂದ್ರತೆ ಕೂಡ ಹೆಚ್ಚಾಗಿದೆ. ಜತೆಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರಕ್ಕೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಹೆಚ್ಚಾಗಿದೆ. ಅಧಿಕಾರಿಗಳು ಹಾಗೂ ನಗರಸಭೆಯ ೩೧ ವಾರ್ಡ್ ಗಳ ಸದಸ್ಯರೊಂದಿಗೆ ಚರ್ಚಿಸಿ ಹಂತಹಂತವಾಗಿ ಸೌಕರ್ಯಗಳನ್ನು ಒದಗಿಸಲು ಮುಂದಾಗುತ್ತೇವೆ. ಎಚ್.ಎನ್. ವ್ಯಾಲಿ ನೀರು ನಗರಕ್ಕೆ ಸಮೀಪದಲ್ಲಿ ಹರಿಯುವುದರಿಂದ ಬಹುತೇಕ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಿಗೆ ಅವಶ್ಯಕವಿರುವ ನೀರಿನ ಪ್ರಮಾಣ ಹಾಗೂ ಅವುಗಳ ಪೂರೈಕೆ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಡಿ.ಎ.ಮಂಜುಳಾ, ಖಲೀಂ ಉಲ್ಲಾ, ಮುಖಂಡರನ್ನು ಶ್ಯಾಮ್, ರಾಮಾಂಜಿನಯ್ಯ, ಬಸವರಾಜ್ ಉಪಸ್ಥಿತರಿದ್ದರು.