ನಗರದಲ್ಲಿ ನಿಮಿಷಕ್ಕೆ 8 – 9 ಜನರಿಗೆ ಸೋಂಕು

ಬೆಂಗಳೂರು.ಏ.೧೯: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಪ್ರತಿ ನಿಮಿಷದ ಲೆಕ್ಕಾಚಾರದಲ್ಲಿ ಹರಡುತ್ತಿರುವ ಅತಂಕಕಾರಿ ಮಾಹಿತಿ ಹೊರ ಬಿದ್ದಿದ್ದು, ಏ೧೭ರ ವರಗಿನ ಕೊರೊನಾ ಸೋಂಕು ಪ್ರಮಾಣದ ಲೆಕ್ಕಾಚಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ ೮ ರಿಂದ ೯ ಜನರಿಗೆ ಕೊರೋನಾ ಸೋಂಕು ತಗುಲುತ್ತಿರುವುದಾಗಿ ತಿಳಿದು ಬಂದಿದೆ.
ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಪ್ರತಿ ನಿತ್ಯ ಹೆಚ್ಚಳವಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ೧೨,೭೯೩ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದುವರೆಗೂ ಸೋಂಕಿತರ ಸಂಖ್ಯೆ ೫,೪೬,೬೩೫ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ೪,೪೩,೬೧೪ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ೯೭,೮೯೭ ಸಕ್ರೀಯ ಸೋಂಕಿತರು ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ. ಇದೇ ಸಂದರ್ಭದಲ್ಲಿ ಶಾಕಿಂಗ್ ಎನ್ನುವಂತೆ ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ ಎಷ್ಟು ಜನರಿಗೆ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ನಡೆದಿರುವ ಲೆಕ್ಕಾಚಾರ ಬಾರಿ ಅತಂಕ ಸೃಷ್ಟಿಸಿದೆ.
ಅಂದಹಾಗೇ ಏಪ್ರಿಲ್ ೧೫,ರಂದು ರಾಜ್ಯಾಧ್ಯಂತ ೧೪,೭೩೮ ಜನರಿಗೆ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇವರಲ್ಲಿ ಬೆಂಗಳೂರು ನಗರದಲ್ಲಿ ೧೦,೪೯೭ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ವರಿದಿಯಾಗಿತ್ತು. ಈ ಮಾಹಿತಿ ಪ್ರಕಾರ ಪ್ರತಿ ನಿಮಿಷಕ್ಕೆ ೮ ಜನರಿಗೆ ಕೊರೊನಾ ತಗುಲಿದೆ ಎನ್ನಲಾಗುತ್ತಿದೆ.
ಏ ೧೬, ರಾಜ್ಯದಲ್ಲಿ ೧೪,೮೫೯ ಜನರಿಗೆ ಹೊಸದಾಗಿ ಕೊರೊನಾ ತಗುಲಿದ್ದರೇ, ಇವರಲ್ಲಿ ಬೆಂಗಳೂರು ನಗರದಲ್ಲೇ ೯,೯೧೭ ಜನರಿಗೆ ತಗುಲಿದ್ದಾಗಿ ತಿಳಿದು ಬಂದಿತ್ತು. ಈ ಮೂಲಕ ಸೋಂಕಿತರ ಸಂಖ್ಯೆ ೫,೨೨,೪೩೮ಕ್ಕೆ ಏರಿಕೆಯಾಗಿದ್ದರೇ, ಸೋಂಕಿತರಾದಂತ ೪,೩೭,೮೦೧ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ೭೯,೬೧೬ ಸಕ್ರೀಯ ಸೋಂಕಿತರಿದ್ದಾರೆ ಎಂಬುದಾಗಿ ತಿಳಿದು ಬಂದಿತ್ತು. ಈ ಸಂಖ್ಯೆ ಗಮನಿಸಿದಾಗ ಪ್ರತಿ ನಿಮಿಷಕ್ಕೆ ೭ ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿರುವುದಾಗಿ ಹೇಳಲಾಗುತ್ತಿದೆ.
ಏಪ್ರಿಲ್ ೧೭, ೨೦೨೧ರಂದು ರಾಜ್ಯಾಧ್ಯಂತ ೧೭,೪೮೯ ಜನರಿಗೆ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರೇ, ಇದರಲ್ಲಿ ಬೆಂಗಳೂರು ನಗರದ ೧೧,೪೦೪ ಸೋಂಕಿತರು ಸೇರಿದ್ದರು. ಈ ಮೂಲಕ ಸೋಂಕಿತರ ಸಂಖ್ಯೆ ೫,೩೩,೮೪೨ಕ್ಕೆ ಏರಿಕೆಯಾಗಿತ್ತು. ಇವರಲ್ಲಿ ೪,೪೧,೦೫೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಕಾರಣ, ೮೭,೭೨೪ ಸಕ್ರೀಯ ಸೋಂಕಿತರು ಇದ್ದರು. ಈ ಸಂಖ್ಯೆ ಗಮನಿಸಿದಾಗ ಪ್ರತಿ ನಿಮಿಷಕ್ಕೆ ೮ ರಿಂದ ೯ ಜನರಿಗೆ ಹೊಸದಾಗಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದಾಗಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಉಳಿದಂತೆ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಸಾವು ಪ್ರಕರಣಗಳ ಸಂಖ್ಯೆ ಕೂಡ ಮುಂದುವರೆದಿದೆ. ಏಪ್ರಿಲ್ ೧೫, ೨೦೨೧ರಂದು ೩೦ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರೇ, ಏಪ್ರಿಲ್ ೧೬, ೨೦೨೧ರಂದು ೫೭ ಸೋಂಕಿತರು ಸಾವನ್ನಪ್ಪಿದ್ದಾರೆ. ಏಪ್ರಿಲ್ ೧೭, ೨೦೨೧ರಂದು ೪೩ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿತ್ತು. ಏಪ್ರಿಲ್ ೧೮, ೨೦೨೧ರಂದು ೬೦ ಸೋಂಕಿತರು ಸಾವನ್ನಪ್ಪುವ ಮೂಲಕ, ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾಗೆ ಬಲಿಯಾದವರ ಸಂಖ್ಯೆ ೫,೧೨೩ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಅಂಕಿ ಸಂಖ್ಯೆ ಗಮನಿಸಿದಾಗ, ಬೆಂಗಳೂರಿನಲ್ಲಿ ಪ್ರತಿ ಗಂಟೆಗೆ ಕೊರೊನಾ ಸೋಂಕಿತರಾದಂತ ೨ ರಿಂದ ೩ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಿದ್ದಾರೆ ಎನ್ನಲಾಗುತ್ತಿದೆ.