ನಗರದಲ್ಲಿ ನಾಯಿ ಕಡಿತ ಪ್ರಕರಣ ದ್ವಿಗುಣ

ಬೆಂಗಳೂರು, ಜು.೨೬- ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ಕಡಿತ ಪ್ರಕರಣಗಳು ದ್ವಿಗುಣಗೊಂಡಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಇದುವರೆಗೂ ೫೨ ಸಾವಿರಕ್ಕೂ ಹೆಚ್ಚು ಮಂದಿ ನಾಯಿ ದಾಳಿಗೆ ಒಳಗಾಗಿದ್ದಾರೆ.
ಕಳೆದ ೨೦೨೦ರಲ್ಲಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದರು, ಇದರ ಜೊತೆಗೆ ಶಾಲಾ ಮಕ್ಕಳು, ವಯಸ್ಸಾದವರ ಮೇಲೂ ಬೀದಿ ನಾಯಿಗಳ ಹಿಂಡು ಮಾರಣಾಂತಿಕ ದಾಳಿ ನಡೆಸಿದ್ದನ್ನು ಜನ ಇನ್ನು ಮರೆತಿಲ್ಲ.
ಬಿಬಿಎಂಪಿ ಲೆಕ್ಕಾಚಾರದಲ್ಲಿ ನಗರದಲ್ಲಿ ೩ ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ನಾಯಿ ದಾಳಿ ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲದಿರುವುದು ವಿಪರ್ಯಾಸವೇ ಸರಿ.
೨೦೨೨ರ ಜನವರಿಯಿಂದ ಇಲ್ಲಿಯವರೆಗೆ ಸರಿಸುಮಾರು ೧೦ ಸಾವಿರ ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ.
ಜನವರಿಯಲ್ಲಿ ೧೬೭೭, ಫೆಬ್ರವರಿಯಲ್ಲಿ ೧೧೩೫, ಮಾರ್ಚ್ ನಲ್ಲಿ ೧೬೦೦, ಏಪ್ರಿಲ್‌ನಲ್ಲಿ ೧೬೭೭, ಮೇ ತಿಂಗಳಿನಲ್ಲಿ ೧೮೫೧, ಜೂನ್‌ನಲ್ಲಿ ೧೧೪೦ ಹಾಗೂ ಜುಲೈ ತಿಂಗಳಿನಲ್ಲಿ ೪೮೩ ಮಂದಿ ನಾಯಿ ದಾಳಿಗೆ ತುತ್ತಾಗಿದ್ದಾರೆ.
ಒಟ್ಟಾರೆ, ಇದುವರೆಗೂ ಕಳೆದ ಮೂರು ವರ್ಷಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ೫೦ ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವುದು ಬಿಬಿಎಂಪಿ ದಾಖಲೆಗಳಿಂದ ಬಹಿರಂಗಗೊಂಡಿದೆ.
ಅದು ಅಲ್ಲದೆ, ಪ್ರತಿನಿತ್ಯ ಸರಾಸರಿ ೭೦ಕ್ಕೂ ಹೆಚ್ಚು ಮಂದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ನಗರದ ಅಷ್ಟ ದಿಕ್ಕುಗಳಲ್ಲೂ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ರಾತ್ರಿಯಾಗುತ್ತಿದ್ದಂತೆ ಜನ ಸಾಮಾನ್ಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಡ ಕಂಡಲ್ಲಿ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ಜನ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಕಂಡುಬರುತ್ತಿದೆ.