ನಗರದಲ್ಲಿ ಗಣರಾಜ್ಯೋತ್ಸವದ ಅದ್ದೂರಿ ಆಚರಣೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ 26:- ಭಾರತವು ಗಣತಂತ್ರ ದೇಶವಾಗಿ ಘೋಷಿಸಿಕೊಂಡು ಸಂವಿಧಾನವನ್ನು ಅಂಗೀಕರಿಸಿದ ದಿನವಾದ ಇಂದು 75ನೇ ಗಣರಾಜ್ಯೋತ್ಸವವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಗಣರಾಜ್ಯೋತ್ಸವದ ಸಂದೇಶಗಳನ್ನು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಪ್ರತಿಯೊಬ್ಬರು ರಾಷ್ಟ್ರ ಹಾಗೂ ರಾಜ್ಯದ ಪ್ರಗತಿಗೆ ಕಟಿಬದ್ಧರಾಗೋಣ. ಗಣತಂತ್ರ ವ್ಯವಸ್ಥೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಜನರ ಸಹಭಾಗಿತ್ವ, ಸಹಕಾರವಿಲ್ಲದೆ ಅರ್ಥಪೂರ್ಣವಾಗಲಾರವು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆಗಳನ್ನು ಬದಿಗೊತ್ತಿ ಬಡತನ, ಅನಕ್ಷರತೆ, ನಿರುದ್ಯೋಗ ನಿರ್ಮೂಲನೆಗೊಳಿಸಲು ಶ್ರಮಿಸಬೇಕು ಎಂದರು. ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ಉದ್ದೇಶವು ಪ್ರತಿಯೊಬ್ಬ ನಾಗರಿಕರಿಗೂ ಮುಲಭೂತ ಹಕ್ಕುಗಳಾದ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ, ಇತರೆ ಹಕ್ಕುಗಳನ್ನು ನೀಡುವುದೇ ಆಗಿದೆ.
ಭಾರತದ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯವಾಗಿದೆ. ಸಂವಿಧಾನ ರಚನಾ ಕಾರ್ಯವನ್ನು ಹೆಚ್ಚು ಶ್ರದ್ಧೆ, ಉತ್ಸುಕತೆಯಿಂದ ನಿರ್ವಹಿಸಿ ಅವಿರತವಾಗಿ ಶ್ರಮಿಸಿದ್ದರಿಂದ ಇಂದು ನಮ್ಮ ಸಂವಿಧಾನವು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದರು.
ಸಂವಿಧಾನದ 75ನೇ ವರ್ಷದ ಆಚರಣೆಯ ಸುಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುವ ಮೂಲಕ ಭಾರತ ದೇಶದಲ್ಲಿಯೇ ಒಂದು ಮಾದರಿಯಾಗಿ ನಮ್ಮ ಕರ್ನಾಟಕ ಸರ್ಕಾರವು ಸಂವಿಧಾನ ದಿನಾಚರಣೆ ಪ್ರಯುಕ್ತ ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಸಂವಿಧಾನ ಜಾಗೃತಿ ಜಾಥಾ ವಾಹನವು ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿಗೂ ತೆರಳುತ್ತಿದ್ದು, ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಸಮಾವೇಶವನ್ನು ಫೆಬ್ರವರಿ 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದಲೂ ಸಂವಿಧಾನ ಜಾಗೃತಿ ವಾಹನವು ಬೆಂಗಳೂರಿನ ಸಮಾವೇಶಕ್ಕೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ 297 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಕೈಗಾರಿಕೆಗಳ ಉತ್ತೇಜನಕ್ಕಾಗಿ ಬದನಗುಪ್ಪೆ-ಕೆಲ್ಲಂಬಲ್ಳಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹಲವು ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ತಿಳಿಸಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಹಿರಿಯ ಅಧಿಕಾರಿಗಳು, ಗಣ್ಯರು ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಜಿಲ್ಲಾ ಸತ್ರ ಪೊಲೀಸ್ ಪಡೆ, ಜಿಲ್ಲಾ ಬ್ಯಾಂಡ್ ವೃಂದ, ಸಿವಿಲ್ ಪೊಲೀಸ್ ತುಕಡಿ, ಅರಣ್ಯ ರಕ್ಷಕರ ದಳ, ಗೃಹರಕ್ಷಕ ದಳ, ಅಬಕಾರಿ, ಸಿಮ್ಸ್ ಎನ್.ಸಿ.ಸಿ ತಂಡ, ಬಂಜಾರ ಇಂಡಿಯನ್, ಸಂತ ಜೋಸೆಫ್, ಸಂತ ತೆರೆಸಾ, ಎಂ.ಸಿ.ಎಸ್. ಮಹಿಳಾ ಶಾಲೆ, ಸೇವಾಭಾರತಿ, ಜೆ.ಎಸ್.ಎಸ್.ಬಾಲಕರ ಪ್ರೌಢಶಾಲೆ, ಅದರ್ಶ ವಿದ್ಯಾಲಯ, ಸಕಾರಿ ಜೂನಿಯರ್ ಕಾಲೇಜು ಸೇರಿದಂತೆ ಒಟ್ಟು 18 ತಂಡಗಳು ನಡೆಸಿದ ಪಥಸಂಚಲನ ಆಕರ್ಷಕವಾಗಿ ಮೂಡಿಬಂತು.
ಸಂತ ಜೋಸೆಫರ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಜೆ.ಎಸ್.ಎಸ್. ಬಾಲಕಿಯರ ಶಾಲೆ, ಬಂಜಾರ ಇಂಡಿಯನ್ ಶಾಲೆ, ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಅಮಚವಾಡಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರ ವಿದ್ಯಾರ್ಥಿಗಳು ಬ್ಯಾಂಡ್ ಪ್ರದರ್ಶನ ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು, ಅದರಲ್ಲೂ ವಿಶೇಷಚೇತನ ಕ್ರೀಡಾಪಟುಗಳು, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯದಲ್ಲಿ ಉತ್ತಮ ಸಾಧನೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಜ್ಯಮಟ್ಟದ ಸಾವಯವ ಹಾಗೂ ಸಿರಿಧಾನ್ಯ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ,ಕಾಂಟ್ರಾಕ್ಟರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಸಂವಿದಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಇತರೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇಂದು ಬೆಳೆಗ್ಗೆಯೇ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಧ್ವಜಾರೋಹಣ ನೆರವೇರಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ, ಇತರರು ಇದ್ದರು.