ನಗರದಲ್ಲಿ ಕೊರೊನಾ ಸ್ಫೋಟಕ್ಕೆ ಅಪಾರ್ಟ್‌ಮೆಂಟ್‌ಗಳೇ ಕಾರಣ

ಮಹಮ್ಮದ್

ಬೆಂಗಳೂರು, ಏ.೩- ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾ ಸ್ಫೋಟಕ್ಕೆ ಅಪಾರ್ಟ್‌ಮೆಂಟ್ ಗಳೇ ಮುಖ್ಯ ಕಾರಣವಾಗಿದ್ದು, ನಗರದ ಬರೋಬ್ಬರಿ ೧೭ ಅಪಾರ್ಟ್‌ಮೆಂಟ್ ಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿ ಪರಿವರ್ತನೆ ಆಗಿವೆ.

ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಗಳಲ್ಲಿಯೇ ಕೊರೋನಾ ಸೋಂಕಿತರು ಹೆಚ್ಚಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಒಟ್ಟಾರೆ ಈ ೧೭ ಅಪಾರ್ಟ್‌ಮೆಂಟ್ ಗಳಲ್ಲಿ ಬರೋಬ್ಬರಿ ೧೨೫ ಸಕ್ರಿಯ ಪ್ರಕರಣಗಳಿರುವುದು ಕಂಗಾಲಾಗುವಂತೆ ಮಾಡಿದೆ.

ಕಾರಣವೇನು:
ಬಹುತೇಕ ಸೋಂಕಿತರು ಹೊರ ರಾಜ್ಯ ಮತ್ತು ವಿದೇಶಗಳಿಗೆ ಪ್ರಯಾಣ ಬೆಳೆಣಿ, ವಾಪಸ್ಸು ಆಗಿರುವುದೇ ಮುಖ್ಯ ಕಾರಣವಾದರೆ, ಮತ್ತೊಂದೆಡೆ ಅಪಾರ್ಟ್‌ಮೆಂಟ್ ಗಳಲ್ಲಿ ಈಜುಕೋಳ, ವ್ಯಾಯಾಮ ಕೊಠಡಿ ಮತ್ತು ಕಾರ್ಯಕ್ರಮ ಆಯೋಜನೆ ಮಾಡಿ, ಒಗ್ಗೂಡುತ್ತಿರುವುದು ಕಾರಣವಾಗಿದೆ.

ಅಲ್ಲದೇ, ಈಗಾಗಲೇ ಬಿಬಿಎಂಪಿ ರೆಸಿಡೆಂಟ್ ವೆಲ್‌ಫೆರ್ ಅಸೋಶಿಯೇಷನ್ ಗಳ ಜೊತೆ ಸಭೆ ನಡೆಸಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳುವ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೊರಡಿಸಿರುವ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲನೆ ಮಾಡುವಂತೆ ಸೂಚಿಸಿತ್ತು.ಆದರೆ, ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗದ ಕಾರಣ ಕೊರೋನಾ ಸೋಂಕು ತಗುಲುತ್ತಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಕ್ಲಸ್ಟರ್ ಹೆಚ್ಚಳ:
೫ ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾದರೆ, ಕೊರೋನಾ ಕ್ಲಸ್ಟರ್ ಎಂದು ಬಿಬಿಎಂಪಿ ಘೋಷಿಸಿದ್ದು, ಸದ್ಯ ಬೆಂಗಳೂರಿನಲ್ಲಿ ಕ್ಲಸ್ಟರ್ ಗಳ ಗಡಿ ೪೧ಕ್ಕೆ ಮುಟ್ಟಿರುವುದು ಆತಂಕ ಹೆಚ್ಚಿಸಿದೆ.

ಹಾಟ್ ಸ್ಪಾಟ್ ವಾರ್ಡ್ ಗಳು: ಕಳೆದ ೧೦ ದಿನಗಳಿಂದ ಅತೀ ಹೆಚ್ಚು ಸೋಂಕಿತರು ಇಲ್ಲಿನ ಹೊರಮಾವು, ಶಾಂತಲನಗರ, ಕೋರಮಂಗಲ, ಆರ್ ಆರ್ ನಗರ, ಬೆಳ್ಳಂದೂರು, ಹೆಚ್.ಎಸ್.ಆರ್ ಲೇಟ್, ಬೇಗೂರು, ವಸಂತಪುರ, ಹೆಮ್ಮಿಗೆಪುರ, ಬ್ಯಾಟರಾಯನಪುರ ವಾರ್ಡ್‌ಗಳಲ್ಲಿದ್ದು, ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.

ಇನ್ನು, ಹಾಟ್‌ಸ್ಪಾಟ್ ಪ್ರದೇಶಗಳನ್ನು ಗುರುತಿಸಿದ ಬೆನ್ನಲ್ಲೇ ೨ನೇ ಅಲ್ಲೆಯಲ್ಲಿ ಬೆಂಗಳೂರಿನ ಸ್ಲಂಗಳು ಸುರಕ್ಷಿತವಾಗಿವೆ. ಕಡಿಮೆ ಸೋಂಕಿತರನ್ನು ಹೊಂದಿರುವ ವಾರ್ಡ್?ಗಳ ಪಟ್ಟಿಯಲ್ಲಿ ಸ್ಲಂ ಪ್ರದೇಶಗಳು ಹೆಚ್ಚಾಗಿವೆ. ಅಲ್ಲದೆ, ಮೊದಲ ಅಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಸ್ಲಂಗಳು ಇದ್ದ ವಾರ್ಡ್‌ಗಳಲ್ಲಿ ದಾಖಲಾಗಿದ್ದವು.

ಪಾದರಾಯನಪುರ, ಮುನೇಶ್ವರ ನಗರ, ಲಕ್ಷ್ಮೀದೇವಿ ನಗರ, ಸಾಗಯಪುರ, ನೀಲಸಂದ್ರದಲ್ಲಿಯೂ ಸೋಂಕಿತರ ಪ್ರಮಾಣ ಕಡಿಮೆಯಾಗಿರುವುದು ಗಮನಾರ್ಹ.

ಯಾವ ಅಪಾರ್ಟ್‌ಮೆಂಟ್, ಎಷ್ಟು ಸಕ್ರಿಯ ಸೋಂಕು

  • ಬೇರಿ ಅನುಗ್ರಹ ಅಪಾರ್ಟ್ಮೆಂಟ್ ಅಪಾರ್ಟ್ಮೆಂಟ್- ೫ ಸಕ್ರಿಯ ಪ್ರಕರಣ
  • ಶೋಭಾ ಅಪಾರ್ಟ್‌ಮೆಂಟ್- ೮ ಸಕ್ರಿಯ ಪ್ರಕರಣ
  • ಹೆರಿಟೇಜ್ ಅಪಾರ್ಟ್ಮೆಂಟ್- ೬ ಸಕ್ರಿಯ ಪ್ರಕರಣ
  • ಇಂಡಿವಿಜಿಯಲ್ ಹೋಮ್-೯ ಸಕ್ರಿಯ ಪ್ರಕರಣ
  • ಸ್ಪೆಕ್ಟ್ರಾ ಸಿಲ್ವಾನ್ ಅಪಾರ್ಟ್‌ಮೆಂಟ್-೭ ಸಕ್ರಿಯ ಪ್ರಕರಣ
  • ಅಜಂತಾ ವಿಹಾರ್ ಅಪಾರ್ಟ್‌ಮೆಂಟ್- ೯ ಸಕ್ರಿಯ ಪ್ರಕರಣ
  • ಶಾಂತಿ ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್ -೧೦ ಸಕ್ರಿಯ ಪ್ರಕರಣ

ಕಾರ್ಖಾನೆಗೂ ಲಗ್ಗೆ ಇಟ್ಟ ಕೊರೋನಾ

ನಗರದ ದಾಸರಹಳ್ಳಿ ವ್ಯಾಪ್ತಿಯ ಆಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ೧೨ ಮಂದಿಗೆ ನಿನ್ನೆ ಸಂಜೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇವರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಒಂದೇ ಶಾಲೆಯ ೨೯ ಮಕ್ಕಳಿಗೆ ಸೋಂಕು

ಇಲ್ಲಿನ ಯಲಹಂಕದ ಭಾರತ್ ಇಂಗ್ಲೀಷ್
ಹೈ ಸ್ಕೂಲ್ ನಲ್ಲಿ ಶಾಲೆಯ ಸಿಬ್ಬಂದಿ ಸೇರಿದಂತೆ ೨೯ ಮಕ್ಕಳಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಎಡೆಮಾಡಿದೆ.

೧೪೪ ವಾರ್ಡಲ್ಲಿ ಹೆಚ್ಚಿನ ಕೇಸ್

ಪಾಲಿಕೆ ೧೯೮ ವಾರ್ಡ್‌ಗಳ ಪೈಕಿ ೧೪೪ ವಾರ್ಡ್‌ಗಳಲ್ಲಿ ೫೦ಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳಿವೆ. ಮಾಚ್‌ರ್ ಕೊನೆಯ ವಾರದಿಂದ ಸೋಂಕು ಪ್ರಕರಣಗಳು ದಿಢೀರ್ ಏರಿಕೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.೫.೪೧ರಷ್ಟಿದೆ. ಸೋಂಕಿನ ಸಕ್ರಿಯ ಸೋಂಕಿನ ಪ್ರಮಾಣ ಶೇ.೫.೫೮ರಷ್ಟಿದೆ. ಸೋಂಕಿತರ ಸಾವಿನ ಪ್ರಮಾಣ ಶೇ.೦.೧೪ರಷ್ಟಿದೆ.

ಎಚ್ಚರಿಕೆವಹಿಸಲು ಸೂಚನೆ

ಅಪಾರ್ಟ್ಮೆಂಟ್ಸ್, ಕಾಂಪ್ಲಾಕ್ಸ್ ಗಳಲ್ಲಿ ವಾಸಿಸುತ್ತಿರುವವರು ಸೋಂಕು ಲಕ್ಷಣಗಳು ಕಂಡುಬಂದರೆ ಕೂಡಲೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಿ.ಜೊತೆಗೆ ಯಾರಿಗಾದರು ಸೋಂಕು ಪತ್ತೆಯಾಗಿದ್ದರೆ ಅವರ ಜೊತೆ ಸಂಪರ್ಕದಲ್ಲಿದ್ದವರು ಮುಂಜಾಗ್ರತೆಯಿಂದ ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಂಡು ಐಸೋಲೇಟ್ ಆದಾಗ ಕೋವಿಡ್ ಸೊಂಕು ಹರಡುವುದು ಕಡಿಮೆಯಾಗಲಿದೆ.

-ಗೌರವ್ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ.