
ಮೈಸೂರು. ಮಾ.26: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದಲೂ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಇದುವರೆಗೂ ರೈತರ ಪರವಾಗಿ ದನಿ ಎತ್ತಿಲ್ಲ ಎಂದು ಆರೋಪಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ.
ಇದಕ್ಕೆ ರಾಜ್ಯ ರೈತ ಸಂಘಟನೆಗಳು ಬೆಂಬಲ ನೀಡಿ ಅಣಕು ಶವಯಾತ್ರೆ, ಪ್ರತಿಭಟನೆ ನಡೆಸಿವೆ. ಮೈಸೂರಿನಲ್ಲಿಯೂ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ನಗರದ ಗನ್ ಹೌಸ್ ಬಳಿ ಕೃಷಿ ಕಾಯ್ದೆಗಳ ಅಣುಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಡಗಲಪುರ ನಾಗೇಂದ್ರ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದ ಅವರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಈ ಕಾಯ್ದೆಗಳ ಮೂಲಕ ದೇಶದ ರೈತಾಪಿ ಕೃಷಿಯನ್ನು ನಾಶ ಮಾಡಿ ಕಂಪೆನಿ ಕೃಷಿಯನ್ನು ಜಾರಿಗೆ ತರುತ್ತಿರುವುದು ಮಾತ್ರವಲ್ಲದೆ ಸಾರ್ವಜನಿಕ ಕ್ಷೇತ್ರವನ್ನು ಕೇಂದ್ರ ಸರ್ಕಾರ ಕಾಪೆರ್Çೀರೇಟ್ ಕಂಪೆನಿಗಳಿಗೆ ಧಾರೆ ಎರೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಕಳೆದ ನಾಲ್ಕು ತಿಂಗಳಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಯುತ್ತಿದೆ. ರೈತರ ಸಮಸ್ಯೆ ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಅದಕ್ಕಾಗಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ನಾವಿಲ್ಲಿ ಅಣಕು ಶವಯಾತ್ರೆ ನಡೆಸಿದ್ದೇವೆ.
ರೈತಾಪಿ ಜನರ ಕೃಷಿ ಉಳಿಸುವ, ದೇಶದ ಆಸ್ತಿಗಳಾದ ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸುವ ಉದ್ದೇಶದಿಂದ ನಾವೆಲ್ಲ ಹೋರಾಟ ಮಾಡುವ ಅಗತ್ಯವಿದೆ ಎಂದರು. ವಿದ್ಯುತ್ ಮಸೂದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ,ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಕೂಡಲೇ ರದ್ದಾಗಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್.ಸ್ವಾಮಿನಾಥನ್ ಶಿಫಾರಸಿನನ್ವಯ ಬೆಂಬಲ ಬೆಲೆ (ಎಂಎಸ್ಪಿ) ಖಾತ್ರಿ ಮಾಡುವ ಕಾನೂನುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳ ಮೂಲಕ ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಹೇಳಿದರು. ರಾಕೇಶ್ ಟಿಕಾಯತ್ ಮೇಲೆ ರಾಜಕೀಯ ದುರಿದ್ದೇಶದಿಂದ ಎಫ್ ಐ ಆರ್ ದಾಖಲಿಸಲಾಗಿದೆ. ಇದು ಹೋರಾಟವನ್ನು ಹತ್ತಿಕ್ಕುವ ಕೆಲಸ. ಕೂಡಲೇ ಅವರ ಮೇಲೆ ಹಾಕಿರುವ ಎಫ್ ಐ ಆರ್ ನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ದಲಿತ ಸಂಘರ್ಷ ಸಮಿತಿಯ ಮುಖಂಡರು. ಕೆ.ಎಸ್.ಶಿವರಾಮು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.