ನಗರದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಉದ್ಘಾಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.30: ನಗರದ ರಾಘವೇಂದ್ರ ಕಾಲೋನಿಯ ಎರಡನೇ ಹಂತ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ  ನೂತನವಾಗಿ ನಿರ್ಮಿಸಲಾಗಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಕಚೇರಿಯ  ಕಟ್ಟಡ ಉದ್ಘಾಟನಾ ಸಮಾರಂಭ  ನಡೆಯಿತು.
ಸಾಂಕೇತಿಕವಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರೆ.
ವಾಸ್ತವವಾಗಿ ನಗರದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ದೀಪಬೆಳಗಿಸಿ ಉದ್ಘಾಟನೆಯ ಶಿಲಾ ಫಲಕದ ಪರದೆ ಸರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು. ನಗರದಲ್ಲಿ 1999 ರಲ್ಲಿ ಈ ಕಚೇರಿಯನ್ನು ಬಾಡಿಗೆ ಕಟ್ಟಡದಲ್ಲಿ ಆರಂಭಿಸಿತ್ತು. ಕೇಂದ್ರ ಸರ್ಕಾರ ಈಗ ಇಲ್ಲಿನ ಒಂದು ಎಕರೆ ಪ್ರದೇಶದಲ್ಲಿ 8.5 ಕೋಟಿ ರೂ ವೆಚ್ಚದಲ್ಲಿ ಸುಜ್ಜಿತವಾಗಿ ನಿರ್ಮಿಸಿದೆ ಎಲ್ಲಾ ಕಾರ್ಮಿಕ ಬಂಧುಗಳಿಗೆ ಸಹಕಾರಿಯಾಗಲಿ ಎಂದರು.
ಸ್ಥಳೀಯ ಕಚೇರಿಯ ಆಯುಕ್ತ   ವೆಂಕಟ ಸುಬ್ಬಯ್ಯ ಅವರು ಮಾತನಾಡಿ ಈ ಕಚೇರಿಯು, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ 4992 ಕಂಪನಿಗಳು, ಉದ್ದಿಮೆಗಳು  ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕಾರ್ಯ ನಿರ್ವಹಿಸುವ 4.96 ಲಕ್ಷ ಜನ ಕಾರ್ಮಿಕರು  ಭವಿಷ್ಯ ನಿಧಿಯ ಖಾತೆ ಹೊಂದಿದ್ದಾರೆ. 21 ಸಾವಿರ ಜನ ನಿವೃತ್ತಿ ವೇತನ ಪಡೆಯುತ್ತಿದ್ದಾರೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ  ಮುಂಬೈನ ಅಡಿಷನಲ್  ಸೆಂಟ್ರಲ್  ಕಮೀಷನರ್ ಡಿ.ರೆಮ್ಮಿ,  ಬೆಂಗಳೂರಿನ  ಪ್ರಾದೇಶಿಕ ಕಚೇರಿಯ ಕಮೀಷನರ್
ಸೆಂಥಿಲ್ ಕುಮಾರ್ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಈ ವರ್ಷ ನಿವೃತ್ತರಾದ 17 ಜನರಿಗೆ ನಿವೃತ್ತಿ ವೇತನದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.