ನಗರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಬೆಂಗಳೂರು, ಜು.೨೬- ಸೈನಿಕರು ಕಾರ್ಗಿಲ್‌ನಲ್ಲಿ ವಿಜಯ ಪತಾಕೆ ಹಾರಿಸಿದ ದಿನಕ್ಕೆ ೨೩ ವರ್ಷಗಳು ಸಂದಿದ್ದು, ಈ ಜಯಭೇರಿಯನ್ನು ನಗರದ ಜನರು ಸಂಭ್ರಮದಿಂದ ಆಚರಣೆ ಮಾಡಿದರು.
ಪ್ರಮುಖವಾಗಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿ ಅವರ ಸಾಹಸವನ್ನು ನೆನಪಿಸಿಕೊಂಡರು.ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸೇನೆ ವಿವಿಧ ದಳದ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಈ ವೇಳೆ ಆಯುಕ್ತರು ಪ್ರತಿಕ್ರಿಯಿಸಿದ ಆಯುಕ್ತರು, ಸೈನಿಕರು ಜೀವವನ್ನು ಲೆಕ್ಕಿಸದೆ ಹೋರಾಡಿದ್ದರಿಂದ ಕಾರ್ಗಿಲ್‌ನಲ್ಲಿ ಜಯ ಗಳಿಸಲು ಸಾಧ್ಯವಾಯಿತು. ಕಾರ್ಗಿಲ್‌ನಲ್ಲಿ ಹೋರಾಡಿದ ಸೈನಿಕರ ಶೌರ್ಯಕ್ಕೆ ದೇಶದ ಪ್ರಜೆಗಳು ಸದಾ ನಮಿಸುತ್ತಾರೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿಗೂ ಸಾವಿರಾರು ಸೈನಿಕರು ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ. ಯೋಧರು ಅತಿಯಾದ ಚಳಿಯಿಂದ ಕೂಡಿದ ಹವಾಮಾನವನ್ನೂ ಲೆಕ್ಕಿಸದೆ ದೇಶದ ಗಡಿಭಾಗವನ್ನು ರಕ್ಷಿಸುತ್ತಿದ್ದಾರೆ. ಸೈನಿಕರ ಈ ತ್ಯಾಗದ ಫಲವಾಗಿ ದೇಶ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ನುಡಿದರು.
ಇದೇ ವೇಳೆ ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬದವರು ಕಾರ್ಗಿಲ್ ಯುದ್ಧದ ದಿನಗಳನ್ನು ನೆನಪಿಸಿಕೊಂಡರು. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯ ಅಧಿಕಾರಿಗಳು ಸ್ಮಾರಕಕ್ಕೆ ಪುಷ್ಪವಿಟ್ಟು ಗೌರವ ಸಲ್ಲಿಸಿದರು.