ನಗರದಲ್ಲಿ ಎಳ್ಳಅಮವಾಸ್ಯೆ ದೇಸಿ ಸ್ವಾದದ ಊಟ: ಆಟೋಟ

ಕಲಬುರಗಿ ಜ 13: ಉತ್ತರ ಕರ್ನಾಟಕದ ರೈತಾಪಿ ವರ್ಗದ ಬಹುದೊಡ್ಡ ಹಬ್ಬ ಎನಿಸಿದ ಎಳ್ಳ ಅಮವಾಸ್ಯೆಯನ್ನು ಇಂದು ನಗರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ಗ್ರಾಮೀಣ ಮೂಲದ ಬಹುದೊಡ್ಡ ಜನಸಂಖ್ಯೆ ಇರುವದರಿಂದ ಹಬ್ಬಕ್ಕೆ ಕಳೆ ಕಟ್ಟಿತು. ನಗರದ ಸಾರ್ವಜನಿಕ ಉದ್ಯಾನ ಸೇರಿದಂತೆ ಹಲವು ಕಡೆ ತಂಡೋಪತಂಡವಾಗಿ ಬಂದ ಜನ ಸೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಕಡುಬು ಬಜ್ಜಿ,ಭರತಾ, ಹಿಂಡಿ ಪಲ್ಲೆ,ಪುಂಡಿ ಪಲ್ಲೆ, ಸೇಂಗಾ ಹಿಂಡಿ, ಬೆಳ್ಳುಳ್ಳಿ ಆಮ್ರ,ಮೊಸರನ್ನ ಸವಿದರು.ಊಟ ಮುಗಿಸಿದ ಹಿರಿಯ ಕಿರಿಯರು ಎಂಬ ಬೇಧವಿಲ್ಲದೇ ಮೈ ಮನ ದಣಿಯುವಂತೆ ವಿವಿಧ ಆಟೋಟದಲ್ಲಿ ಭಾಗಿಯಾದರು.
ಕೊರೋನಾ ಹಿನ್ನೆಲೆಯಲ್ಲಿ ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಸೇಡಂ ರಸ್ತೆಯ ಅಮೃತ ಸರೋವರ ಮೊದಲಾದ ಕಡೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದ್ದರಿಂದ ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನದಲ್ಲಿ ಜನದಟ್ಟಣೆ ಹೆಚ್ಚಾಯಿತು.
ಗ್ರಾಮೀಣ ಭಾಗದಲ್ಲಿ ರೈತರು ಎತ್ತಿನ ಗಾಡಿಗಳಲ್ಲಿ ಹೊಲಕ್ಕೆ ತೆರಳಿ ಬನ್ನಿಗಿಡದ ಕೆಳಗೆ ಪಾಂಡವರನ್ನು ಸಾಂಕೇತಿಸುವ ಐದು ಚಿಕ್ಕ ಕಲ್ಲುಗಳನ್ನು ಪೂಜಿಸಿ, ಭೂ ಮಾತೆಗೆ ಚರಗ ಚಲ್ಲಿ ಸಾಮೂಹಿಕವಾಗಿ ದೇಸಿ ಊಟ ಸವಿದು ಎಳ್ಳ ಅಮವಾಸ್ಯೆಯನ್ನು ಸಂಭ್ರಮಿಸಿದರು