ನಗರದಲ್ಲಿ ಎಲ್ಲೆಂದರಲ್ಲೆ ವಾಹನ ದಾಖಲೆ ಪರಿಶೀಲನೆ : ಸಂಚಾರಿ ಪೊಲೀಸರ ವಿರುದ್ಧ ಸಾರ್ವಜನಿಕರಲ್ಲಿ ತೀವ್ರಗೊಂಡ ಆಕ್ರೋಶ

ಡಿಜಿಪಿ ಸೂಚನೆಗೂ ಕವಡೆ ಕಿಮ್ಮತ್ತು ನೀಡಿದ ಪೊಲೀಸ್ ಇಲಾಖೆ – ಇಲ್ಲಿಯ ಪರಿಸ್ಥಿತಿ ಬಗ್ಗೆ ಡಿಜಿಪಿಗೆ ಟ್ವಿಟ್ಟರ್ ಮೂಲಕ ಮಾಹಿತಿ
ರಾಯಚೂರು.ಜು.೧೮- ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಸೂಚನೆಯ ನಂತರವೂ ನಗರದಲ್ಲಿ ಎಲ್ಲೆಂದರೆಲ್ಲಿ ವಾಹನ ತಡೆದು ದಾಖಲೆ ಪರಿಶೀಲಿಸುವ ಸಂಚಾರ ಪೊಲೀಸರ ಕಾರ್ಯಾಚರಣೆ ಈಗ ಸಾರ್ವಜನಿಕರ ಮಧ್ಯೆ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಫುಟ್ ಪಾತ್ ಸೇರಿದಂತೆ ಎಲ್ಲಾ ರಸ್ತೆಗಳು ಅತಿಕ್ರಮಣದಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿರುವ ಬಗ್ಗೆ ಗಮನಿಸಿದ ಸಂಚಾರ ಪೊಲೀಸ್ ಇಲಾಖೆ ರಾಜ್ಯ ಉನ್ನತ ಅಧಿಕಾರಿಗಳ ಆದೇಶವನ್ನೆ ಉಲ್ಲಂಘಿಸಿ, ನಗರದಲ್ಲಿ ಅನಗತ್ಯವಾಗಿ ವಾಹನಗಳನ್ನು ತಡೆದು ದಂಡ ವಿಧಿಸುವ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆಂಬ ಆರೋಪ ತೀವ್ರಗೊಳ್ಳುವಂತೆ ಮಾಡಿದೆ. ಸ್ವತಃ ರಾಜ್ಯದ ಬಿಜೆಪಿ ಪ್ರವೀಣ್ ಸೂದ್ ಅವರು ಅನಗತ್ಯ ವಾಹನ ತಡೆಯಬೇಡಿ ಎಂದು ಆದೇಶ ನೀಡಿದ್ದರೂ ಮತ್ತು ಅನಗತ್ಯ ವಾಹನ ತಪಾಸಣೆ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೂ ಕಳೆದ ೧೫ ದಿನಗಳಿಂದ ನಗರದಲ್ಲಿ ವಾಹನ ತಪಾಸಣೆ ಪ್ರಕ್ರಿಯೆ ನಡೆಯುತ್ತಿರುವುದರ ವಿರುದ್ಧ ಡಿಜಿಪಿ ಅವರಿಗೆ ಟ್ವಿಟ್ಟರ್ ಮೂಲಕ ಮಾಹಿತಿ ನೀಡಲಾಗಿದೆ.
ರಾಜ್ಯದ ನಗರ ಪ್ರದೇಶ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ತಡೆಯುವುದನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ಡಿಜಿಪಿ ಅವರು ಸ್ಪಷ್ಟವಾಗಿ ಹೇಳಿದ್ದರೂ ನಗರದಲ್ಲಿ ಮಾತ್ರ ತಪಾಸಣೆ ಪ್ರಕ್ರಿಯೆ ಯಥಾರೀತಿಯಲ್ಲಿ ಮುಂದುವರೆದಿದೆ. ಈ ತಪಾಸಣೆಯಿಂದ ಸಾರ್ವಜನಿಕರು ಭಾರೀ ತೊಂದರೆ ಎದುರಿಸುವಂತಾಗಿದೆ. ಬೆಂಗಳೂರು ಸೇರಿದಂತೆ ಇತರೆ ಯಾವುದೇ ಭಾಗದಲ್ಲಿ ಇಲ್ಲದ ತಪಾಸಣೆ ರಾಯಚೂರಿನಲ್ಲಿ ಮಾತ್ರ ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ.
ನಗರದಲ್ಲಿ ಸಂಚಾರಕ್ಕೆ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ಪದೇ ಪದೇ ಜನರು ಒತ್ತಾಯಿಸಿದರೂ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ರಸ್ತೆಗಳಲ್ಲೂ ಭಾರೀ ವಾಹನಗಳ ನಿಲುಗಡೆ ಹಾಗೂ ಫುಟ್‌ಪಾತ್‌ಗಳ ಅತಿಕ್ರಮಣ ಪಾರ್ಕಿಂಗ್ ಇಲ್ಲದ ಶಾಪಿಂಗ್ ಕಾಂಪ್ಲೆಕ್ಸ್‌ಗಳಿಂದ ಸಾರ್ವಜನಿಕರು ಭಾರೀ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಒಂದು ಶಿಸ್ತು ಬದ್ಧ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರೂ, ಕ್ರಮ ಕೈಗೊಳ್ಳುತ್ತಿಲ್ಲ.
ಅಲ್ಲದೆ, ವಾಹನ ಸಂಚಾರದ ಹೆಸರಲ್ಲ ಮುಂಜಾನೆಯಿಂದ ಸಂಜೆವರೆಗೂ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿರುವುದರ ಬಗ್ಗೆ ತೀವ್ರ ಬೇಸರ ಮೂಡಿಸಿದೆ. ಶಾಲಾ, ಕಾಲೇಜು, ಕಛೇರಿ ಹಾಗೂ ಇನ್ನಿತರ ತುರ್ತು ಕಾರ್ಯಗಳಿಗೆ ತೆರಳುತ್ತಿರುವ ಜನರ ಪೊಲೀಸರು ತಪಾಸಣೆ ಪ್ರಕ್ರಿಯೆಯಿಂದ ಅನಗತ್ಯ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಮಹಿಳೆಯರು, ಯುವತಿಯರನ್ನೂ ಬಿಡದೆ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ. ತುರ್ತು ಕಾರ್ಯದ ನಿಮಿತ್ಯ ಇತರರ ವಾಹನಗಳನ್ನು ಬಳಸುವ ವ್ಯಕ್ತಿಗಳು ಈ ಕಾರ್ಯಾಚರಣೆಯಿಂದ ಸಮಸ್ಯೆಗೆ ಗುರಿಯಾಗಿದ್ದಾರೆ.
ರಾಜ್ಯದಲ್ಲಿ ಅನಗತ್ಯ ದಾಖಲಾತಿ ಪರಿಶೀಲನೆ ತಡೆಯವಂತೆ ಸ್ವತಃ ಡಿಜಿಪಿ ಅವರೆ ಹೇಳಿದರು. ನಗರದಲ್ಲಿ ಇದು ತಡೆಯುತ್ತಿಲ್ಲ ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ತಾಲೂಕಿನಲ್ಲಿ ಇಲ್ಲದ ತಪಾಸಣೆ ಕೇವಲ ರಾಯಚೂರಿಗೆ ಮಾತ್ರ ಸೀಮಿತವಾಗಿರುವುದು ಜನರ ತೀವ್ರ ಅಸಮಾಧಾನಗೊಳ್ಳುವಂತೆ ಮಾಡಿದೆ. ಈಗಾಗಲೇ ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳಿಂದ ಬೆಲೆ ಏರಿಕೆಯಿಂದ ತತ್ತರಿಸಿ ಹೋದ ಜನರು ವಾಹನ ತಪಾಸಣೆಯ ದಂಡ ಬೇಸತ್ತಿದ್ದಾರೆ.
ಕೆಲವಡೆಯಂತೂ ಯಾವುದೇ ರಶೀದಿ ನೀಡದೆ, ವಾಹನ ಚಾಲಕರಿಂದ ಹಣ ವಸೂಲಿ ಮಾಡುವಂತಹ ಘಟನೆಗಳಿಗೆ ಇದು ದಾರಿ ಮಾಡಿದೆ. ತಕ್ಷಣವೆ ಈ ಅನಗತ್ಯ ತಪಾಸಣೆಯನ್ನು ಸ್ಥಗಿತಗೊಳಿಸುವಂತೆ ಜನರು ಒತ್ತಾಯಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಈ ಅನಗತ್ಯ ತಪಾಸಣೆಯಿಂದ ಯುವಕರು ಸಂದಿ, ಗಂದಿಗಳಲ್ಲಿ ವಾಹನಗಳನ್ನು ಓಡಿಸಿಕೊಂಡು ಹೋಗುವ ಸಂದರ್ಭಗಳಲ್ಲಿ ಅಪಘಾತಕ್ಕೆ ಗುರಿಯಾಗುವಂತಹ ಪ್ರಸಂಗಗಳಿಗೆ ಎಡೆ ಮಾಡಿದ ಘಟನೆಗಳು ನಡೆದಿವೆ. ಈ ಎಲ್ಲಾ ಘಟನೆಗಳನ್ನು ಗಮನಿಸಿ, ಈ ಹಿನ್ನೆಲೆಯಲ್ಲಿ ತಕ್ಷಣವೆ ಈ ಅನಗತ್ಯ ತಪಾಸಣೆ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಒಂದಷ್ಟು ನೆಮ್ಮದಿಯಿಂದ ಓಡಾಡಲು ಅವಕಾಶ ಮಾಡಿಕೊಡಲಾಗುತ್ತದೆಯೆ?.