ನಗರದಲ್ಲಿ ಇಂದು ಸ್ವಚ್ಚತಾ ಕಾರ್ಯ

ರಾಯಚೂರು.ಮೇ.28- ನಗರದ ವಿವಿಧ ರಸ್ತೆ ಮತ್ತು ಚರಂಡಿ ಅಕ್ಕಪಕ್ಕದಲ್ಲಿ ಹಾಕಲಾಗಿದ್ದ ಚರಂಡಿಯ ಹೂಳು ಮತ್ತು ಕಸದ ರಾಶಿಯನ್ನು ಇಂದು ಸ್ವಚ್ಛಗೊಳಿಸಲಾಯಿತು.
ನಿನ್ನೆ ಸಂಜೆವಾಣಿ ಪತ್ರಿಕೆ ಈ ವಿಷಯದ ಬಗ್ಗೆ ಸುದ್ದಿ ವರದಿ ಮಾಡಿತ್ತು. ನಗರಸಭೆ ಅಧ್ಯಕ್ಷ ಈ.ವಿನಯ ಅವರು ಅದನ್ನು ಗಮನಿಸಿ, ಇಂದು ಮುಂಜಾನೆಯಿಂದಲೇ ಸ್ವಚ್ಛತಾ ಕಾರ್ಯ ನಿರ್ವಹಿಸಲಾಯಿತು. ಅನೇಕ ಕಡೆ ತಿಪ್ಪೆ ಗುಂಡಿಯಿಂದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು. ರಾಜ ಕಾಲುವೆಗಳ ಹೂಳೆತ್ತಿ, ಕಾಲುವೆ ಅಕ್ಕಪಕ್ಕದಲ್ಲಿ ಸಂಗ್ರಹಿಸಲಾಗಿತ್ತು. ಇದರಿಂದ ಅಲ್ಲಿಯ ನಿವಾಸಿಗಳಿಗೆ ದುರ್ವಾಸನೆ ಮಧ್ಯೆ ವಾಸಿಸುವಂತಹ ಪ್ರಸಂಗ ನಿರ್ಮಾಣವಾಗಿತ್ತು. ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ನಿನ್ನೆ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.
ಇಂದು ಜೆಸಿಬಿ, ಟ್ರ್ಯಾಕ್ಟರ್ ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ಎಲ್ಲೆಡೆ ಕಸ ಮತ್ತು ರಾಜ ಕಾಲುವೆ ಹೂಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ಬಂಗಿಕುಂಟಾ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.