ನಗರದಲ್ಲಿ ಆಲಿಕಲ್ಲು ಮಳೆಯ ಆರ್ಭಟ

ಕಲಬುರಗಿ,ಏ.28 : ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು ಮಿಂಚಿನ ಆರ್ಭಟದೊಂದಿಗೆ ಆಲಿಕಲ್ಲಿನ ರಭಸದ ಮಳೆಯಾಗಿದೆ.
ಜನ ಮನೆಯೊಳಗೆ ನಿಂತು ಪ್ರಕೃತಿ ವೈಚಿತ್ರ ಕಣ್ತುಂಬಿಕೊಂಡರು. ಯುವಕರು ಮಕ್ಕಳು ಪಾತ್ರಪಗಡದೊಳಗೆ ಆಲಿಕಲ್ಲು ತುಂಬಿಕೊಂಡು ಖುಷಿಪಟ್ಟರು. ಆಲಿಕಲ್ಲಿನ ಮಳೆಯ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.ರಸ್ತೆ,ಕಟ್ಟಡಗಳ ಸುತ್ತಮುತ್ತ ರಾಶಿ ರಾಶಿ ಅಲಿಕಲ್ಲು ( ಗಾರ) ಬಿದ್ದವು.ಕೆಲವು ಕಡೆ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದು ರಸ್ತೆ ಶ್ವೇತಮಯವಾಗಿತ್ತು.ಗಾಳಿಯ ರಭಸಕ್ಕೆ ಕೆಲವು ಕಡೆ ಮರಗಿಡಗಳು ಉರುಳಿ ಬಿದ್ದಿವೆ. ಪತ್ರಾಗಳು ಹಾರಿ ಹೋಗಿವೆ.
ನಗರದ ಕೆಲವು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.ಕಲಬುರಗಿ,ಯಾದಗಿರಿ,ರಾಯಚೂರು ಮತ್ತು ಮೈಸೂರು ಜಿಲ್ಲೆಗೆ ಶನಿವಾರ ಯಲ್ಲೊ ಅಲರ್ಟ್ ಘೋಷಿಸಲಾಗಿದ್ದು ಭಾರಿ ಮಳೆಯ ಸಾಧ್ಯತೆ ಇದೆ.ರಾಜ್ಯದ ಅತ್ಯಧಿಕ ಉಷ್ಣಾಂಶ 37.6 ಡಿಸೆ ಕಲುರಗಿಯಲ್ಲಿ ದಾಖಲಾಗಿದೆ.
ತಾಪಮಾನ:
ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 37.7, ಕನಿಷ್ಠ 25.1 , ಬೀದರ ಗರಿಷ್ಠ 35, ಕನಿಷ್ಠ 21.5, ವಿಜಯಪುರ ಗರಿಷ್ಠ 36.5 ,ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.