ನಗರದಲ್ಲಿ ಅಪರಾಧ ಇಳಿಕೆ ಡ್ರಗ್ಸ್ ಸೈಬರ್ ಕ್ರೈಂ ಹೆಚ್ಚಳ

ಬೆಂಗಳೂರು,ಡಿ.೩೦- ಮಹಾಮಾರಿ ಕೊರೊನಾ ವಕ್ಕರಿಸಿದ ನಂತರ ನಗರದಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಕಳೆದ ಮಾರ್ಚ್ ೨೫ ರಿಂದ ಕೊರೊನಾ ಲಾಕ್‌ಡೌನ್ ಜಾರಿಯಾದ ನಂತರ ಸುಮಾರು ಏಳೆಂಟು ತಿಂಗಳ ಕಾಲ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಹುತೇಕ ಪುಡಿರೌಡಿಗಳು ಕೊರೊನಾಗೆ ಹೆದರಿ ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಿ ಮನೆಯಲ್ಲಿಯೇ ಉಳಿದುಕೊಂಡಿದ್ದರು. ನ್ಯಾಯಾಲಯಗಳೂ ಕೂಡ ಹೆಚ್ಚು ಕಾರ್ಯ ನಿರ್ವಹಿಸಿದ್ದುದ್ದರಿಂದ ಜೈಲಿನಿಂದ ಬಿಡುಗಡೆಯಾಗಬೇಕಿದ್ದವರಿಗೆ ಜಾಮೀನು ಸಿಗದೆ ಸೆರೆ ವಾಸದಲ್ಲೇ ಕಳೆಯಬೇಕಾಯಿತು.
ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡಿದ್ದ ಕೆಲವರು ಲಾಕ್‌ಡೌನ್ ಸಡಿಲಗೊಂಡ ನಂತರ, ಹಣದ ಅನಿವಾರ್ಯತೆಯಿಂದ ಅಡ್ಡದಾರಿಗಳತ್ತ ಹೆಜ್ಜೆ ಹಾಕಿದರು.
ಇದರಿಂದಾಗಿ ಲಾಕ್‌ಡೌನ್‌ನಲ್ಲಿ ಕಡಿವಾಣ ಬಿದ್ದಿದ್ದ ಮನೆಗಳ್ಳತನ, ಸರಗಳ್ಳತನ, ಕೊಲೆ, ವಾಹನ ಕಳ್ಳತನ, ಇನ್ನಿತರ ಅಪರಾಧ ಪ್ರಕರಣಗಳು ಅನ್‌ಲಾಕ್ ನಂತರ ಹೆಚ್ಚಾದವು.
ಡ್ರಗ್ಸ್ ಪ್ರಕರಣ ಹೆಚ್ಚಳ:
ಅಪರಾಧ ಪ್ರಕರಣಗಳು ಕಡಿಮೆಯಾದರೂ ಸೈಬರ್ ಅಪರಾಧ ಹಾಗೂ ಡ್ರಗ್ಸ್ ಪ್ರಕರಣಗಳು ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಾಗಿವೆ
ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಮಂದಿ ಮನೆಯಲ್ಲಿಯೇ ಕೆಲಸ ಮಾಡಿದ್ದರಿಂದ ಆನ್‌ಲೈನ್ ವಹಿವಾಟು, ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ, ಆನ್‌ಲೈನ್ ತರಗತಿಗಳು ಹೆಚ್ಚಾದ ಕಾರಣ ಸೈಬರ್ ಖದೀಮರ ಹಾವಳಿಯೂ ಹೆಚ್ಚಾಯಿತು.
ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬಹುತೇಕ ಜನರ ಖಾಸಗಿ ಮಾಹಿತಿಗೆ ಕನ್ನ ಹಾಕಿ ಕೋಟ್ಯಂತರ ರೂಪಾಯಿ ದೋಚಿದ್ದಾರೆ. ಹಾಗೆಯೇ ಮದ್ಯದಂಗಡಿಗಳು ಬಂದ್ ಆಗಿದ್ದ ಕಾರಣ ಬಹುತೇಕರು ಆನ್‌ಲೈನ್ ಮುಖಾಂತರ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು.
ಈ ವರ್ಷ ಎನ್‌ಸಿಬಿ (ಮಾದಕ ವಸ್ತು ನಿಯಂತ್ರಣ ಬ್ಯುರೋ) ಹಾಗೂ ಬೆಂಗಳೂರು ಪೊಲೀಸರು ಉತ್ತಮ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಸೈಬರ್ ಅಪರಾಧ:
ಕೊರೊನಾ ಸಮಯದಲ್ಲಿ ಬಹಳ ಮಂದಿ
ಮನೆಯಲ್ಲಿಯೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡಿದರೆ ಹಲವು ಮಂದಿ ನಿರುದ್ಯೋಗಿಗಳಾದರು.
ಹ್ಯಾಕರ್ಸ್ ಇದನ್ನು ಸದುಪಯೋಗ ಮಾಡಿಕೊಂಡು ಬಹಳಷ್ಟು ಮಂದಿಗೆ ವಂಚಿಸಿದ್ದು ೮,೧೬೭ ಸೈಬರ್ ಅಪರಾಧ
ಪ್ರಕರಣಗಳು ದಾಖಲಾಗಿವೆ.
ಅದರಲ್ಲಿ ೨೦೧ ಪ್ರಕರಣಗಳು ಪತ್ತೆಯಾಗಿವೆ. ತುರ್ತು ಸಾಲ ನೀಡುವುದಾಗಿ ವಂಚನೆ, ಕೆಲಸ ಕೊಡಿಸುವುದಾಗಿ ಆಮಿಷ, ಮ್ಯಾಟ್ರಿಮೋನಿಯಲ್ ದೋಖಾ, ಅಶ್ಲೀಲ ಸಂದೇಶ, ಫೋಟೋ ರವಾನೆಯಂತಹ ಪ್ರಕರಣಗಳು ಹೆಚ್ಚಾಗಿವೆ.
ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚು ದಾಖಲಾದ ಜಿಲ್ಲೆಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮೈಸೂರು ನಗರ, ಮಂಗಳೂರು ನಗರ, ಚಿಕ್ಕಮಗಳೂರು, ಕೋಲಾರ, ಧಾರವಾಡ, ದಾವಣಗೆರೆ, ಶಿವಮೊಗ್ಗ ಹೀಗೆ ಹಲವು ಜಿಲ್ಲೆಗಳಿವೆ.
೭೩೫ ಡ್ರಗ್ಸ್ ಪ್ರಕರಣ:
ಜನವರಿಯಿಂದ ಈವರೆಗೂ ದಾಖಲಾದ ಪ್ರಕರಣಗಳನ್ನು ನೋಡುವುದಾದರೆ ಬೆಂಗಳೂರಿನ ೭ ವಿಭಾಗಗಳಲ್ಲಿ ೭೩೫ ಪ್ರಕರಣಗಳು ದಾಖಲಾಗಿವೆ. ಆದರೆ ಪೊಲೀಸರು ಹೇಳುವ ಪ್ರಕಾರ ಕೊರೊನಾ ವರದಿಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಪೊಲೀಸರ ಕಣ್ತಪ್ಪಿಸಿ ಕೊಕೇನ್, ಅಫೀಮು, ಗಾಂಜಾ, ಹಶೀಶ್, ಹೆರಾಯಿನ್, ಎಲ್‌ಎಸ್‌ಡಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಈ ವಿಚಾರ ತಿಳಿದು ಸ್ಯಾಂಡಲ್‌ವುಡ್ ನಟಿಮಣಿಯರು ಮತ್ತು ಅವರ ಆಪ್ತರನ್ನು ಖೆಡ್ಡಾಕ್ಕೆ ಕೆಡವಲಾಯಿತು.
ಸಂಚಾರ ನಿಯಮ ಉಲ್ಲಂಘನೆ:
ನಗರ ಸಂಚಾರ ಪೊಲೀಸರು ಈ ವರ್ಷ ೭೩೨೪೮೯ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, ೮೩,೨೨,೨೨,೯೧೦ ರೂಗಳ ಭಾರೀ ಮೊತ್ತದ ದಂಡ ಸಂಗ್ರಹಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಕದ್ದುಮುಚ್ಚಿ ಓಡಾಡಿದವರ ಸಂಖ್ಯೆಯೇ ಅಧಿಕವಾಗಿದೆ. ಆದರೆ ಪೊಲೀಸರು ತಂತ್ರಜ್ಞಾನದ ಮುಖಾಂತರ ಸಿಗ್ನಲ್ ಬಳಿ ಇರುವಂತಹ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಬಹುತೇಕ ಸವಾರರಿಗೆ ದಂಡ ವಿಧಿಸಿ ಮನೆ ಬಾಗಿಲಿಗೇ ನೋಟಿಸ್ ನೀಡಿ ದಂಡ ವಸೂಲಿ ಮಾಡಿದ್ದಾರೆ.