ನಗರದಲ್ಲಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲ

ಗೌರಿಬಿದನೂರು,ಮಾ.೩೦- ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷೆ ಎಸ್.ರೂಪ ಅನಂತರಾಜು ರವರ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ಆಯೋಜಿಸಿದ್ದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಎಸ್.ರೂಪ ಅನಂತರಾಜು ಮಾತನಾಡಿ, ಇತ್ತೀಚೆಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಅಗತ್ಯಕ್ಕೆ ತಕ್ಕಂತೆ ವಾರ್ಡ್ ವಾರು ಸೌಲಭ್ಯಗಳನ್ನು ಒದಗಿಸಲು ವಿವಿಧ ಯೋಜನೆಗಳಿಗೆ ಬಳಕೆ ಮಾಡಲಾಗುವುದು. ಜತೆಗೆ ನಗರದಲ್ಲಿ ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷದವರು ಹಾಗೂ ಖಾಸಗೀಯವರು ಅಳವಡಿಸುವ ಪ್ಲೆಕ್ಸ್ ಬ್ಯಾನರ್ ಮತ್ತು ಬಾವುಟಗಳಿಗೆ ನಿಗಧಿತ ಶುಲ್ಕವನ್ನು ವಿಧಿಸಿ ನಗರಸಭೆಗೆ ಆದಾಯ ಬರುವಂತೆ ಮಾಡಲಾಗುವುದು, ಸರ್ವ ಸದಸ್ಯರ ನಿರ್ದೇಶನದಂತೆ ಅಗತ್ಯವಿರುವ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಸದಸ್ಯ ಫರೀದ್ ಮಾತನಾಡಿ, ನಗರದಲ್ಲಿನ ಪ್ರತೀ ವಾರ್ಡಿನಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಚರಂಡಿಗಳು, ಖಾಲಿ ನಿವೇಶನಗಳು ಮತ್ತು ರಸ್ತೆ ಬದಿಗಳಲ್ಲಿ ತ್ಯಾಜ್ಯವು ತುಂಬಿ ದುರ್ನಾತ ಬೀರುತ್ತಿದ್ದರೂ ಕೂಡ ಅವುಗಳನ್ನು ತೆರವುಗೊಳಿಸಿ ಕನಿಷ್ಟ ಮಟ್ಟದ ಸೌಕರ್ಯ ಒದಗಿಸಲು ಅಧಿಕಾರಿಗಳು ಸಿದ್ದರಿಲ್ಲ. ವರ್ಷಗಳು ಕಳೆದರೂ ಕೂಡ ವಾರ್ಡಿನಲ್ಲಿನ ಚರಂಡಿಗಳ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಮತ ನೀಡಿದವರ ಮನೆ ಬಾಗಿಲಿಗೆ ತೆರಳಿದರೆ ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಕಾರಣವಾಗಿರುವ ಅಧಿಕಾರಿಗಳು ಇಚ್ಛಾಶಕ್ತಿ, ಬದ್ಧತೆ ಮೆರೆಯಬೇಕಾಗಿದೆ. ಇಲ್ಲವಾದಲ್ಲಿ ಸದಸ್ಯರೆಲ್ಲರೂ ಸೇರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಸದಸ್ಯ ಮೋಹನ್ ಮತ್ತು ರಫೀಕ್ ಮಾತನಾಡಿ, ನಗರದ ಜನತೆ ಬದುಕಿದ್ದಾಗ ನೆಮ್ಮದಿ ಸಿಗದಿರಬಹುದು ಆದರೆ ಸತ್ತ ಮೇಲೆ ರುದ್ರಭೂಮಿಯಲ್ಲಿ ಹೆಣಗಳನ್ನು ನೆಮ್ಮದಿಯಿಂದ ಹೂಳಲು ಸಾಧ್ಯವಾಗುತ್ತಿಲ್ಲ. ಜತೆಗೆ ರಂಧ್ರ ಭೂಮಿಯಲ್ಲಿ ಕನಿಷ್ಟ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ವಿಫವಾಗಿರುವುದು ನಾಚಿಕೆಗೆಡಿನ ಸಂಗತಿಯಾಗಿದೆ. ನಗರಸಭೆ ಸದಸ್ಯರು ಕೇವಲ ಕುರಿಗಳಂತೆ ಸಾಮಾನ್ಯ ಸಭೆಗೆ ಹಾಜರಾಗಿ ಅಧಿಕಾರಿಗಳು ನೀಡಿದ ತಿಂಡಿ ತಿಂದು ಹೋಗುವಂತಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಶಾಸ್ತ್ರ
ನಗರಸಭೆಯ ವಿವಿಧ ವಾರ್ಡ್ ಗಳ ಸಮಗ್ರ ಅಭಿವೃದ್ಧಿಗಾಗಿ ಇತ್ತೀಚೆಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು ೧೬ ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸ್ಥಳೀಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಶೀಘ್ರದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಒಂದೆರಡು ದಿನಗಳಲ್ಲಿ ಗುತ್ತಿಗೆದಾರರನ್ನು ಕರೆಸಿ ನಗರದ ವಾರ್ಡ್ ವೊಂದರಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಶಾಸ್ತ್ರ ಮಾಡೋಣ ನಂತರದ ದಿನಗಳಲ್ಲಿ ಕೆಲಸ ಮುಂದುವರೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಎಇಇ ಶೇಖ್ ಪಿರೋಜ್.