ನಗರಕ್ಕೆ ಕಸ ಸಂಕಷ್ಟ : ನಾಗರೀಕರಿಂದ ತಿಪ್ಪೆಗೆ ಬೆಂಕಿ

ರಾಯಚೂರು.ಮಾ.೨೩- ನಗರದ ರಸ್ತೆ ಮತ್ತು ಬಡಾವಣೆಗಳಲ್ಲಿ ರಾಶಿ ರಾಶಿಯಾಗಿ ಬಿದ್ದ ಕಸ ಸ್ವಚ್ಛಗೊಳಿಸದಿರುವ ಹಿನ್ನೆಲೆಯಲ್ಲಿ ಜನರು ಅಲ್ಲಲ್ಲಿ ತಿಪ್ಪೆಗೆ ಬೆಂಕಿ ಹಚ್ಚಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಕಳೆದ ಒಂದು ತಿಂಗಳಿಂದ ನಗರಸಭೆ, ಜಿಲ್ಲಾಡಳಿತ ಮತ್ತು ಇಲ್ಲಿಯ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬೇಸತ್ತ ಜನ ಇವರ ಹಣೆಬರಹ ಇಷ್ಟೆ ಎನ್ನುವ ಬೇಸರದಿಂದ ತಮ್ಮ ಮನೆ ಮುಂಭಾಗದಲ್ಲಿರುವ ಕಸಕ್ಕೆ ಬೆಂಕಿ ಹಚ್ಚಿ, ದುರ್ವಾಸನೆ ಮತ್ತು ಕಸದ ಧೂಳಿನಿಂದ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪ್ರತಿ ವಾರ್ಡಿನಲ್ಲಿ ನಗರಸಭೆ ಸದಸ್ಯರಿದ್ದರೂ ಇವರಿಗೆ ಕಸ ಸಮಸ್ಯೆಯಾಗಿ ಕಾಣಿಸದಿರುವುದು ಜನರು ತೀವ್ರ ಅಸಮಾಧಾನಗೊಳ್ಳುವಂತೆ ಮಾಡಿದೆ.
ಮುಖ್ಯ ರಸ್ತೆಗಳಲ್ಲೂ ಅರ್ಧದಷ್ಟೂ ರಸ್ತೆ ತಿಪ್ಪೆ ಕಸದಿಂದ ಚೆಲ್ಲಾಪಿಲ್ಲಿಯಾಗಿದ್ದರೂ, ಈ ಬಗ್ಗೆ ಗಮನ ಹರಿಸುವವರೇ ಇಲ್ಲದಂತಾಗಿದೆ. ಚರಂಡಿಗಳ ಪಾಡಂತೂ ಕೇಳುವುದೇ ಬೇಡ. ಬಹುತೇಕ ಕಡೆ ಹೂಳು ತೆಗೆಯದಿರುವುದರಿಂದ ಚರಂಡಿಗಳ ನೀರು ತುಂಬಿ ದುರ್ವಾಸನೆ ಸ್ಥಳೀಯರನ್ನು ಬಾಧಿಸುವಂತೆ ಮಾಡಿದೆ. ನಿರಂತರವಾಗಿ ಕಸ ತೆರವಿಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ, ನಗರಸಭೆ, ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಪೌರ ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಆದರೆ, ಪ್ರತಿನಿತ್ಯ ಭಾರೀ ಪ್ರಮಾಣದಲ್ಲಿ ಕಸ ಸಂಗ್ರಹವಾಗುವ ಮಾಹಿತಿ ಇರುವ ನಗರಸಭೆ ಅಧಿಕಾರಿಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದರ ವೈಫಲ್ಯದಿಂದ ರಾಯಚೂರು ನಗರ ಎಲ್ಲಿ ನೋಡಿದರಲ್ಲೂ ಕಸದಿಂದ ತುಂಬಿ ಹೋಗಿದೆ. ದನ, ಹಂದಿ, ನಾಯಿಗಳ ಕೆದರಾಟದಿಂದ ರಸ್ತೆಗಳಲ್ಲಿ ಪ್ಲಾಸ್ಟಿಕ್ ಚೀಲಗಳು ಚೆಲ್ಲಾಪಿಲ್ಲಿಗೊಂಡು ಗಾಳಿಗೆ ಹಾರಿ, ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಈ ಕಸದ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ, ಇಲ್ಲಿವರೆಗೂ ಪರ್ಯಾಯ ವ್ಯವಸ್ಥೆ ಕೈಗೊಳ್ಳದೇ, ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ಕುಳಿತಿದ್ದಾರೆ.
ನಗರಸಭೆ ಚುನಾಯಿತ ಸಮಿತಿಯ ಸದಸ್ಯರು ಜನರ ತೊಂದರೆ ಬಗ್ಗೆ ಕನಿಷ್ಟ ಕಾಳಜಿ ವಹಿಸುತ್ತಿಲ್ಲ. ಇನ್ನೆಷ್ಟು ದಿನ ಈ ಕಸದ ಸಮಸ್ಯೆ ಜನ ಎದುರಿಸಬೇಕು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಇದು ನಗರಸಭೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಬಗ್ಗೆ ನಂಬಿಕೆ ಕಳೆದುಕೊಂಡು ಯಾರು ಬಂದರೂ ಏನು ಆಗುವುದಿಲ್ಲ ಎನ್ನುವ ಅಸಹಾಯಕತೆಗೆ ಶರಣಾಗಿದ್ದಾರೆ. ಕನಿಷ್ಟ ನಗರಸಭೆ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವರೇ?.