ನಗರಕ್ಕೂ ಹಬ್ಬಿದ ಮಂಕಿಪಾಕ್ಸ್

ಬೆಂಗಳೂರು, ಜು.೩೦- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣಗಳ ಮಾದರಿಯಲ್ಲಿ ವ್ಯಕ್ತಿಯೊಬ್ಬರು ಕಂಡುಬಂದಿದ್ದು, ಭಾರೀ ಆತಂಕ ಎದುರಾಗಿದೆ.
ಜುಲೈ ೪ಕ್ಕೆ ಇಥಿಯೋಪಿಯದಿಂದ ಬೆಂಗಳೂರಿಗೆ ಬಂದಿದ್ದ ೫೫ ವರ್ಷದ ವ್ಯಕ್ತಿಯೂ ಮಂಕಿ ಪಾಕ್ಸ್ ಶಂಕಿತ ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್,ಈತ ಆಫ್ರಿಕಾ ಮೂಲದ ವ್ಯಕ್ತಿಯಾಗಿದ್ದು, ಮಂಕಿಪಾಕ್ಸ್ ಗುಣ ಲಕ್ಷಣಗಳು ಪತ್ತೆವಾಗಿವೆ. ಕೂಡಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚಿನ ಶುಶ್ರೂಶೆ ಹಾಗೂ ನಿಗಾ ಇಡಲಾಗಿದೆ ಎಂದು ಹೇಳಿದರು.
ಕಿಡ್ನಿ ಕಸಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಈತ, ಮೈಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳು ಕಂಡು ಬಂದಿದೆ. ಮಂಕಿಪಾಕ್ಸ್ ಶಂಕಿತನ ಸ್ಯಾಂಪಲ್ಸ್ ಪುಣೆಯ ಎನ್ ಐವಿ ಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಅದು ಅಲ್ಲದೆ,ಮೊನ್ನೆ ರಾತ್ರಿ ವ್ಯಕ್ತಿಯ ಎಡ ಗೈಯಲ್ಲಿ ತುರಿಕೆ ಕಾಣಿಸಿಕೊಂಡಿದೆ. ತುರಿಕೆ ಕ್ರಮೇಣವಾಗಿ ನಿನ್ನೆ ಸಂಜೆ ಹೊತ್ತಿಗೆ ಇಡೀ ದೇಹ ವ್ಯಾಪಿಸಿದೆ. ಎಡಗಾಲಿನ ತೊಡೆಯ ಭಾಗದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದೆ. ಈಗ ತೀವ್ರ ಜ್ವರವೂ ಇತ್ತು.
ಮತ್ತೊಂದೆಡೆ, ಈ ವ್ಯಕ್ತಿಯ ಜೊತೆಗೆ ಆತನ ಸಹೋದರ ಹಾಗೂ ಸಹೋದರಿ ಇದ್ದರು. ಶಂಕಿತ ವ್ಯಕ್ತಿ ಮೂರು ವರ್ಷಗಳಿಂದ ಆಫ್ರಿಕಾ ಬಿಟ್ಟು ಹಲವು ದೇಶಗಳಲ್ಲಿ ಚಿಕಿತ್ಸೆ ಓಡಾಡಿದ್ದ ಎನ್ನುವ ಮಾಹಿತಿ ಗೊತ್ತಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.