ನಗದು ವರ್ಗಾವಣೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಚನೆ


ಗದಗ, ಜು.13: ಸರಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ. ಅಕ್ಕಿ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ನಗದನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಪ್ರಕ್ರಿಯೆ ಜಿಲೆಯಲ್ಲಿ ಆರಂಭವಾಗಿದ್ದು ಇನ್ನೆರೆಡು ದಿನಗಳಲ್ಲಿ ಅರ್ಹ ಫಲಾನುಭವಿಗಳೆಲ್ಲರಿಗೂ ನಗದು ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅನ್ನಭಾಗ್ಯ ಯೋಜನೆಯ ಅನುಷ್ಠಾನ ಕುರಿತಂತೆ ಪಡಿತರ ಅಂಗಡಿಗಳ ಮಾಲೀಕರು, ಆಹಾರ ಇಲಾಖೆಯ ನೀರಿಕ್ಷಕರು, ಶಿರಸ್ತೇದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಅರ್ಹ ಫಲಾನುಭವಿಗಳೆಲ್ಲರಿಗೂ ಸರ್ಕಾರದ ಸೌಲಭ್ಯ ದೊರಕಬೇಕು. ಈ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಜಿಲ್ಲೆಯ ಎಲ್ಲ ಫಲಾನುಭವಗಳಿಗೂ ನಗದು ವರ್ಗಾವಣೆಗೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಪಡಿತರ ಕಾರ್ಡುದಾರರು ಈ-ಕೆವೈಸಿ ಮಾಡಿಸಿದರ ಕುರಿತು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಈ-ಕೆವೈಸಿ ಮಾಡಿಸದೇ ಇದ್ದಲ್ಲಿ ತಕ್ಷಣವೇ ಈ-ಕೇವೈಸಿ ಕಾರ್ಯ ಪೂರ್ಣಗೊಳಿಸಬೇಕು. ಪಡಿತರ ಕಾರ್ಡಿನಲ್ಲಿರುವ ಸದಸ್ಯರು ಬ್ಯಾಂಕ, ಅಥವಾ ಅಂಚೇ ಕಚೇರಿಯಲ್ಲಿ ಖಾತೆ ಹೊಂದಿರಬೇಕು. ಪಡಿತರ ನಗದು ವರ್ಗಾವಣೆಗೆ ತಾಂತ್ರಿಕ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಗಂಗಪ್ಪ ಎಂ., ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 2,56,000 ಬಿ.ಪಿ.ಎಲ್ ಹಾಗೂ ಎ.ಎ.ವಾಯ್ ಪಡಿತರ ಚೀಟಿದಾರರಿದ್ದಾರೆ. ಈ ಪೈಕಿ 6,800 ಪಡಿತರ ಕಾರ್ಡಿನ ಮುಖ್ಯಸ್ಥರ ಖಾತೆ ಕ್ರಿಯಾಶೀಲವಾಗಿಲ್ಲ, 20,800 ಪಡಿತರ ಸದಸ್ಯರು ಬ್ಯಾಂಕ ಅಥವಾ ಅಂಚೇ ಕಚೇರಿಯಲ್ಲ ಖಾತೆ ಹೊಂದಿರುವುದಿಲ್ಲ, 1,200 ಪಡಿತರ ಪಡಿತರ ಚೀಟಿದಾರರ ಮುಖ್ಯಸ್ಥರು ಯಾರೆಂಬುದು ಇನ್ನೂ ನಿರ್ಣಯವಾಗಿರುವುದಿಲ್ಲ. 215 ಫಲಾನುಭವಿಗಳ ಆಧಾರ ಕಾರ್ಡಗಳ ವಿವರ ಮಾನ್ಯವಾಗಿರುವುದಿಲ್ಲ. ಈ ಕುರಿತು ಈ ಎಲ್ಲ ನ್ಯೂನತೆಗಳನ್ನು ಜುಲೈ 20 ರೊಳಗಾಗಿ ಹತ್ತಿರದ ಪಡಿತರ ಕೇಂದ್ರ ಅಥವಾ ಆಹಾರ ನೀರಿಕ್ಷಕರ ಕಚೇರಿಗಳಿಗೆ ಭೇಟಿ ಮಾಡಿ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲೆಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ.ಅಕ್ಕಿಯ ಬದಲಾಗಿ ನಗದು ವರ್ಗಾವಣೆಗಾಗಿ ಒಟ್ಟು 12.46 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 1,88,000 ಪಡಿತರ ಮುಖ್ಯಸ್ಥರಿಗೆ ಡಿ.ಬಿ.ಟಿ. ಮೂಲಕ ನಗದು ವರ್ಗಾವಣೆ ಮಾಡಲು ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿ ನಗದು ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಜಿಲ್ಲೆಯ 45,727 ಪಡಿತರ ಫಲಾನುಭವಿಗಳು ಈವರೆಗೂ ಈ-ಕೆವೈಸಿ ಮಾಡಿಸಿರುವುದಿಲ್ಲ ಶೀಘ್ರವೇ ಈ-ಕೆವೈಸಿ ಮಾಡಿಸಬೇಕು ಎಂದರು.
ಜಿಲ್ಲೆಯ ಪಡಿತರ ಚೀಟಿದಾರರ ಸದಸ್ಯರ ಪೈಕಿ 20,800 ಸದಸ್ಯರು ಬ್ಯಾಂಕ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವುದಿಲ್ಲ. ಅವರೆಲ್ಲರೂ ಹತ್ತಿರದ ಅಂಚೆ ಕಚೇರಿಗೆ ತೆರಳಿ ಖಾತೆ ತೆರೆಯಬೇಕು. ಅಂಚೆ ಕಚೇರಿಗೆ ತೆರಳುವಾಗ ಆಧಾರ ಕಾರ್ಡ, ಆಧಾರ ಕಾರ್ಡ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ರೂ. 200 ಮೊತ್ತವನ್ನು ಪಾವತಿಸಿ ಖಾತೆ ತೆರೆಯಬೇಕು. ಈ ಪ್ರಕ್ರಿಯೆ ಶೀಘ್ರವಾಗಿ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಅಂಚೆ ಕಚೇರಿಯ ಅಧಿಕಾರಿ ಆನಂದ ಸಾಗರ, ಆಹಾರ ಇಲಾಖೆಸಹಾಯ ನಿರ್ದೇಶಕಿ ಗೀರಿಜಮ್ಮ ಹಿರೇಮಠ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಆಹಾರ ನೀರಿಕ್ಷಕರು, ಶಿರೇಸ್ತೆದಾರರು, ಪಡಿತರ ಅಂಗಡಿಗಳ ಮಾಲೀಕರು ಹಾಜರಿದ್ದರು.