ನಕ್ಸಲ್ ನೆರವಿನಿಂದ ಕೈ ಪ್ರಣಾಳಿಕೆ ಸಿದ್ಧ

ರವಿ ಟೀಕೆ

ಮೈಸೂರು, ಏ. ೮- ತಾಲಿಬಾನ್‌ಗಳ ಪ್ರೇರಣೆ ಮತ್ತು ನಗರ ನಕ್ಸಲೀಯರ ನೆರವಿನಿಂದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ದೇಶದ ಜನರೇ ರಾಹುಲ್ ಗಾಂಧಿಯವರಿಗೆ ಕಡ್ಡಾಯ ರಜೆ ಕೊಡುತ್ತಾರೆ ಎಂದು ಭವಿಷ್ಯ ನುಡಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ತೆರಿಗೆ ಪಾಲು ಕೊಟ್ಟಿದೆ. ಬೇಕಾದರೆ ಚರ್ಚೆ ನಡೆಸಲಿ. ಬಿಜೆಪಿ ಅವರು ಕಾಂಗ್ರೆಸ್‌ನ ದೃಷ್ಠಿದೋಷ ನಿವಾರಿಸುವುದಾಗಿ ಹೇಳಿದರು.
ಕಾಂಗ್ರೆಸ್‌ಗೆ ದೇಶ ವಿಭಜನೆ ರೋಗ ಆವರಿಸಿದೆ. ಇದು ಹಿಂದಿನಿಂದಲೂ ಇದೆ. ಈಗಲೂ ಮುಂದುವರಿದಿದೆ ಎಂದು ಕಿಡಿಕಾರಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ. ಹೀಗಾಗಿ ಕಾಂಗ್ರೆಸ್ ವಿಭಜನೆ ಯೋಚನೆ ಪ್ರಣಾಳಿಕೆಯಲ್ಲೇ ಸತ್ತು ಹೋಗುತ್ತದೆ ಎಂದು ವ್ಯಂಗ್ಯವಾಡಿದರು.
ಯುಪಿಎ ಸರ್ಕಾರ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಕಾರಣ ಯಾರು? ಎಂದು ಪ್ರಶ್ನಿಸಿದ ಅವರು ರಾಜ್ಯಕ್ಕೆ ಕೊಟ್ಟ ತೆರಿಗೆ ಹಣ, ಅನುದಾನ ಎಷ್ಟು? ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಹಣದ ವಿಚಾರದ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಸಿಎಂ ವಿರುದ್ಧ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಇರುವುದನ್ನೇ ಮರೆತಂತೆ ಕಾಣುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೊಟ್ಟ ಕೊಡುಗೆ ಬಗ್ಗೆ ವಿವರ ನೀಡಿ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾಲು ನೀಡಿದವರು ಪ್ರಧಾನಿ. ಈ ದಾಖಲೆಗಳನ್ನು ಮುಂದಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಯಾರನ್ನು ಕರೆದುಕೊಂಡು ಬಂದು ಒಕ್ಕಲಿಗ ಎಂದರೆ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪಾಲಿಕೆ ಮತ್ತು ವಿಧಾನ ಪರಿಷತ್ತು ಚುನಾವಣೆಯಲ್ಲಿ ಪರಾಭವಗೊಂಡಿರುವವರನ್ನು ಲೋಕಸಭಾ ಚುನಾವಣೆಗೆ ಟಿಕೆಟ್ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಚುನಾವಣೆಗೆ ಮುನ್ನವೇ ಸಿದ್ದರಾಮಯ್ಯ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳೇ ಇಲ್ಲದ ಕಾರಣ ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಅವರನ್ನು ಲಘುವಾಗಿ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ನವರೇ ಕರೆಯುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.