ನಕ್ಸಲರ ದಾಳಿ ಜಿ.ಪಂ.ಸದಸ್ಯ ಹತ್ಯೆ

ಬಿಜಾಫೂರ್ (ಛತ್ತಿಸಗಢ), ಮಾ. ೨೭: ಛತ್ತಿಸಗಡದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಫೂರ್ ಜಿಲ್ಲೆಯ ಮಿರ್ತರ್ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮಿರ್ತರ್ ಪ್ರದೇಶದ ಬುದ್ ರಾಂ ಕಶ್ಯಪ್ ಹತ್ಯೆಯಾದ ಜಿಲ್ಲಾ ಪಂಚಾಯಿತಿ ಸದಸ್ಯ ಎಂದು ಗುರುತಿಸಲಾಗಿದೆ. ರಾಂ ಕಶ್ಯಪ್ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ನಕ್ಸಲರು, ಮಾರಕಾಸ್ತ್ರಗಳೊಂದಿಗೆ ರಾಂ ಕಶ್ಯಪ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಕುರಿತಂತೆ ತನಿಖೆ ಮುಂದುವರಿದಿದೆ. ಹತ್ಯೆಗೆ ಕಾರಣವೇನು? ಇನ್ನಿತರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಿಪಿ ಸುಂದರ್ ರಾಜ್ ತಿಳಿಸಿದ್ದಾರೆ.