ನಕ್ಸಲರಿಂದ ಪೋಲಿಸ್ ಮಾಹಿತಿದಾರನ ಹತ್ಯೆ

ಧಮತರಿ (ಛತ್ತೀಸ್‌ಗಢ),ಮಾ.೯- ಹೋಳಿ ಹಬ್ಬದ ಸಂಭ್ರಮದಂದೇ ನಕ್ಸಲರು ರಕ್ತ ಹರಿಸಿದ್ದು, ಪೊಲೀಸರ ಮಾಹಿತಿದಾರ ಎಂದು ಅನುಮಾನ ವ್ಯಕ್ತಪಡಿಸಿ ವ್ಯಕ್ತಿಯೊಬ್ಬನನ್ನು ಅಪಹರಿಸಿ ಕಾಡಿನಲ್ಲಿ ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಒಡಿಶಾ ಮತ್ತು ಛತ್ತೀಸ್‌ಗಢ ಗಡಿಯಲ್ಲಿರುವ ಖಲ್ಲಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಮೇದಾ ನಿವಾಸಿಯಾದ ನಾರದ್ ಮಾರ್ಕಮ್ ಹತ್ಯೆಯಾದವರು. ಪೊಲೀಸರಿಗೆ ತಮ್ಮ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾನೆ ಎಂಬ ಆರೋಪದ ಮೇರೆಗೆ ನಾರದ್ ಮನೆಗೆ ದಾಳಿ ಮಾಡಿದ ನಕ್ಸಲೀಯರ ಗುಂಪು, ಆತನನ್ನು ಅಪಹರಿಸಿದ್ದಾರೆ.
ಕಾಡಿನೊಳಗೆ ಎಳೆದೊಯ್ದದಲ್ಲದೇ, ಆತನಿಗೆ ಚಿತ್ರಹಿಂಸೆ ನೀಡಲಾಗಿದೆ. ಬಳಿಕ ಒಡಿಶಾಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಾರದನ ಶವ ಬಿಸಾಡಿದ್ದು, ಇಂದು ಪತ್ತೆಯಾಗಿದೆ. ಶವದ ಮೇಲೆ ಕರಪತ್ರವೊಂದನ್ನು ಇಡಲಾಗಿದೆ. ಅದರಲ್ಲಿ ಹೀಗೆ ಯಾರಾದರೂ ಮಾಡಿದಲ್ಲಿ ಇದೇ ಗತಿಯಾಗಲಿದೆ ಎಂದು ಮಾವೋವಾದಿಗಳು ಎಚ್ಚರಿಕೆ ಸಂದೇಶ ಬರೆಯಲಾಗಿದೆ.
ಛತ್ತೀಸ್‌ಗಢ ಮತ್ತು ಒಡಿಶಾ ಗಡಿ ಭಾಗದಲ್ಲಿ ನಕ್ಸಲೀಯರ ಚಟುವಟಿಕೆ ತೀವ್ರವಾಗಿದೆ. ಇಲ್ಲಿ ಪೊಲೀಸರು ನಕ್ಸಲ್ ವಿರೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಇದರ ವಿರುದ್ಧ ನಕ್ಸಲೀಯರು ದ್ವೇಷದ ಪ್ರತೀಕವಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ನಕ್ಸಲೀಯರ ವಿರುದ್ಧ ಧಮ್ತಾರಿ ಪೊಲೀಸರ ನಿರಂತರ ಕ್ರಮದಿಂದಾಗಿ ನಕ್ಸಲೀಯರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ. ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ ೪ ಮಂದಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ೨೦೨೨ ರ ಜನವರಿ ೧೫ ರಂದು ೫ ನಕ್ಸಲೀಯರನ್ನು ಬಂಧಿಸಿದ್ದರು. ಇವರಲ್ಲಿ ೨ ಮಹಿಳೆಯರು ಮತ್ತು ೨ ಪುರುಷರೊಂದಿಗೆ ಅಪ್ರಾಪ್ತನೂ ಇದ್ದಾನೆ. ಇದು ನಕ್ಸಲೀಯರ ಕೋಪಕ್ಕೆ ಕಾರಣವಾಗಿದೆ.
ಎಚ್ಚರಿಕೆ ಸಂದೇಶ:
ಜಿಲ್ಲೆಯ ನಾರಾಯಣಪುರದ ಕುಕ್‌ಜೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲೀಯರು ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಕೆಲ ಜನಪ್ರತಿನಿಧಿಗಳ ಹತ್ಯೆಯ ಎಚ್ಚರಿಕೆ ನೀಡಿದ್ದಾರೆ. ನೆಲನಾರ್ ಪ್ರದೇಶ ಸಮಿತಿಯ ಸಂದು ಹೆಸರಿನಲ್ಲಿ ಬ್ಯಾನರ್ ಅಂಟಿಸಲಾಗಿದೆ. ನಕ್ಸಲೀಯರು ಜನಪ್ರತಿನಿಧಿಗಳ ಹೆಸರನ್ನು ಬ್ಯಾನರ್‌ನಲ್ಲಿ ಬರೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಸರಪಂಚ್ ಹರಿ ಮಾಂಝಿ, ಕೋಮಲ್ ಮಾಂಝಿ, ಛೋಟೆಡೊಂಗರ್‌ನ ಬಡರಾಜ್ ತಪ್ಪು ತಿದ್ದಿಕೊಂಡು ಶರಣಾಗದಿದ್ದರೆ, ನಾಯಕ ಸಾಗರ್ ಸಾಹು ಅವರಂತೆ ಕೊಲೆ ಮಾಡುವುದಾಗಿ ನಕ್ಸಲೀಯರು ಎಚ್ಚರಿಕೆ ನೀಡಿದ್ದಾರೆ.
ಮೂವರು ನಾಯಕರ ಹತ್ಯೆ:
ಛತ್ತೀಸ್‌ಗಢದಲ್ಲಿ ಅಟ್ಟಹಾಸ ಮೆರೆದಿದ್ದ ನಕ್ಸಲರು ಮೂವರು ಬಿಜೆಪಿ ನಾಯಕರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಒಂದೇ ವಾರದ ಅಂತರದಲ್ಲಿ ಮೂವರು ನಾಯಕರ ಹತ್ಯೆ ನಡೆಸಲಾಗಿದೆ. ಫೆಬ್ರವರಿ ೫ರಂದು ಬಿಜಾಪುರದಲ್ಲಿ ಬಿಜೆಪಿಯ ಉಸುರು ಮಂಡಲದ ಅಧ್ಯಕ್ಷ ನೀಲಕಂಠ ಕಕ್ಕೆಂ, ಫೆ.೧೦ ರಂದು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣ ಸಾಹು, ಫೆಬ್ರವರಿ ೧೨ ರಂದು ಮಾಜಿ ಸರಪಂಚ್ ರಾಮಧರ್ ಅಲಾಮಿ ಅವರನ್ನು ನಕ್ಸಲರು ಹತ್ಯೆ ಮಾಡಿದ್ದರು.
ಛತ್ತೀಸ್‌ಗಢದ ಬಸ್ತಾರ್ ವಿಭಾಗವು ನಕ್ಸಲ್‌ಪೀಡಿತ ಪ್ರದೇಶವಾಗಿದೆ. ಇದೇ ವಿಭಾಗದಲ್ಲೇ ಈ ಮೂವರು ಬಿಜೆಪಿ ಮುಖಂಡರ ಕೊಲೆಗಳು ನಡೆದಿವೆ. ಮದುವೆಗೆ ಹೋದ ಸಂದರ್ಭದಲ್ಲಿ ನೀಲಕಂಠ ಕಕ್ಕೆಂ ಅವರನ್ನು ಕೊಡಲಿ ಮತ್ತು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಬಿಜೆಪಿ ಉಪಾಧ್ಯಕ್ಷ ನಾರಾಯಣ ಸಾಹು ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ. ರಾಮಧರ್ ಅಲಾಮಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಲ್ಲದೇ, ಈ ಕೊಲೆಯ ಹೊಣೆಯನ್ನು ನಕ್ಸಲರು ಹೊತ್ತುಕೊಂಡಿದ್ದು, ಪತ್ರವೊಂದು ಘಟನಾ ಸ್ಥಳದಲ್ಲಿ ಎಸೆದು ಹೋಗಿದ್ದರು.