ನಕ್ಕು ನಗಿಸುವ ಕಲಾವಿದರ ನಿಜ ಜೀವನ ಕಷ್ಟಕಾರ್ಪಣ್ಯಗಳಿಂದ ಕೂಡಿದೆ: ಮಂಜಮ್ಮ ಜೋಗತಿ

ವಿಜಯಪುರ, ಮಾ.21-ಲೋಕದ ದೃಷ್ಟಿಯಲ್ಲಿ ನಕ್ಕು ನಗಿಸುವ ಕಲಾವಿದರ ನಿಜ ಜೀವನ ಅನೇಕ ಕಷ್ಟಕಾರ್ಪಣ್ಯಗಳಿಂದ ಕೂಡಿದೆ. ನೋವು ತುಂಬಿದ ಬದುಕು ಕಟ್ಟಿಕೊಂಡು ಸಮಾಜಕ್ಕೆ ನಲಿವು ನೀಡುವ ಜಾನಪದ ಕಲಾವಿದರು ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಹೇಳಿದರು.
ಬಬಲೇಶ್ವರ ತಾಲೂಕಿನ ನಿಡೋಣಿ ವಿರಕ್ತಮಠದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ತಾಲೂಕಾ ಘಟಕ ಬಬಲೇಶ್ವರ ಮತ್ತು ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿ ಗೌಡತಿ ಪಾಟೀಲ್ ಜಾನಪದ ಪ್ರತಿಷ್ಠಾನ ಹಾಗೂ ನಿಡೊಣಿ ಗ್ರಾಮಸ್ಥರ ಸಹಯೋಗದಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತದಕ್ಕಾಗಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಕಲಾವಿದರಿಗೆ ಕೇವಲ ಚಪ್ಪಾಳೆ ಸನ್ಮಾನ ಬದುಕು ರೂಪಿಸುವುದಿಲ್ಲ. ಅವರಿಗೆ ಆರ್ಥಿಕ ಸಹಾಯ ಸಹಕಾರ ನೀಡಬೇಕು. ನಾನು ಅಕಾಡೆಮಿ ಅಧ್ಯಕ್ಷರಾದರೂ ನನಗೆ ಸ್ವಂತ ಮನೆ ಇಲ್ಲ ಬಾಡಿಗೆ ಮನೆಯುಲ್ಲಿ ಬದುಕು ಸಾಗಿಸುತ್ತಿದ್ದೇನೆ. ಎಂದು ಕಣ್ಣೀರಿಟ್ಟರು.
ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ಪ್ರಮಾಣದ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಾನಪದ ಕಲಾವಿದರು ನಮ್ಮ ಸಂಸ್ಕøತಿ ಉಳಿಸುವ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ. ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ನಿಡೋಣಿಯ ಸುರೇಶ ಜೋಶಿಯವರಿಂದ ನಿಡೋಣಿ ಗ್ರಾಮಕ್ಕೆ ಘನತೆ ಬಂದಿದೆ ಎಂದರು.
ಪ್ರೊ. ದೇವೇಂದ್ರ ಗೋನಾಳ ಅಭಿನಂದನಾ ನುಡಿ ಹೇಳುತ್ತಾ ಪದ್ಮಶ್ರೀ ಪಡೆದ ಮಂಜಮ್ಮ ಜೋಗತಿ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಸುರೇಶ ಜೋಶಿಯವರ ಕಲೆಯ ಜೀವನ ತೆರೆದಿಟ್ಟರು. ನಿಡೋಣಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಾನಿಧ್ಯ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಸದಸ್ಯ ಉಮೇಸ ಕೊಳಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ. ಕುಮಾನಿ ತಾ.ಪಂ. ಸದಸ್ಯ ಲಕ್ಷ್ಮಣ ಗುನದಾಳ, ಗ್ರಾ.ಪಂ. ಅಧ್ಯಕ್ಷೆ ದ್ರಾಕ್ಷಯಣಿ ಶಹಾಪೂರ, ಕಜಾಪ ಬಬಲೇಶ್ವರ ಅಧ್ಯಕ್ಷ ಗೂಳಪ್ಪ ಯರನಾಳ ಉಪಸ್ಥಿತರಿದ್ದರು.
ಬಸವರಾಜ ಬಡಿಗೇರ ನಿರೂಪಿಸಿದರು. ಪ್ರೊ. ಜಿ.ಎಂ. ಹಳ್ಳೂರ ಸ್ವಾಗತಿಸಿದರು. ಮೌಲಾಸಾಬ ಜಹಾಗೀರದಾರ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಂಜಮ್ಮ ಜೋಗತಿ ಮತ್ತು ಸುರೇಶ ಜೋಸಿಯವರನ್ನು ಎತ್ತಿನಗಾಡಿಯಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ 15 ಜಾನಪದ ಕಲಾ ತಂಡಗಳಿಂದ ಪ್ರದರ್ಶನ ನಡೆಯಿತು.