ನಕಾಶೆ ಇದ್ದರೂ ಮನೆಗೆ ಹೋಗಲು ರಸ್ತೆ ಇಲ್ಲ: ಕುಟುಂಬದ ಅಳಲು

ಕೊರಟಗೆರೆ, ಜು. ೯- ನಕಾಶೆ ರಸ್ತೆ ಇದ್ದರೂ ಅಕ್ಕ ಪಕ್ಕದ ಜಮೀನಿನವರ ಒತ್ತುವರಿಯಿಂದ ರಸ್ತೆ ಇಲ್ಲದಂತಾಗಿ ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗಲು ಹಾಗೂ ನಮ್ಮ ದಿನನಿತ್ಯ ವ್ಯವಹಾರಕ್ಕೆ ತುಂಬಾ ಪರಿತಪಿಸುವಂತಾಗಿದೆ ಎಂದು ಕುಟುಂಬವೊಂದು ಅಳಲು ತೋಡಿಕೊಂಡಿದೆ.
ಕೊರಟಗೆರೆ ತಾಲ್ಲೂಕು ಪಾತಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿಂಗನಪಾಳ್ಯ ಗ್ರಾಮದ ರಂಗಹರಸಯ್ಯ ಎಂಬುವರ ಕುಟುಂಬದವರು ನೋವು ತೋಡಿಕೊಂಡಿದ್ದು, ನಮ್ಮ ಮನೆಗೆ ರಸ್ತೆ ಇಲ್ಲದೆ ತುಂಬಾ ನೋವು ಅನುಭವಿಸುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಿಂಗನ ಪಾಳ್ಯ ಗ್ರಾಮದ ಸರ್ವೆ ನಂಬರ್ ೧೦೯/೫ ರಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಗ್ರಾಮದಿಂದ ೫೦೦-೬೦೦ ಮೀಟರ್ ದೂರದಲ್ಲಿ ಮನೆಯಿದ್ದು, ಈ ಮನೆಗೆ ಸಿಂಗನಪಾಳ್ಯ ಹಾಗೂ ಹುಲ್ಲುವಂಗಲ ಎರಡು ಕಡೆಯಿಂದ ನಕಾಶೆ ರಸ್ತೆ ಇದ್ದರೂ ಒತ್ತುವರಿಯಿಂದ ರಸ್ತೆಯೇ ಕಣ್ಮರೆಯಾಗಿದ್ದು, ಕೇಳಿದರೆ ಜಗಳ – ಬಡಿದಾಟಕ್ಕೆ ಬರುವುದರಿಂದ ಕುಟುಂಬ ಊರು ತೊರೆಯುವ ಸ್ಥಿತಿಗೆ ಬಂದಿದ್ದೇವೆ. ಕಂದಾಯ ಅಧಿಕಾರಿಗಳಿಗೆ ರಸ್ತೆ ಒತ್ತುವರಿ ತೆರವು ಮಾಡಿಸಿ ಕೊಡಿ ಎಂದರೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಂಗನಪಾಳ್ಯ ಊರು ಹಾಗೂ ಕೆರೆ ಅಂಗಳದ ಕಡೆಯಿಂದ ಮತ್ತು ಹುಲುವಂಗಲ ಗ್ರಾಮದ ಕಡೆಯಿಂದ ಸಹ ನಕಾಶೆ ರಸ್ತೆ ಇದ್ದು, ಆ ರಸ್ತೆಯನ್ನು ಅಕ್ಕಪಕ್ಕದ ಜಮೀನಿನವರು ಪೂರ್ಣ ಒತ್ತುವರಿ ಮಾಡಿಕೊಂಡು ಒಂದು ಕಾಲ್ಧಾರಿಗೂ ತೊಂದರೆ ಅನುಭವಿಸುತ್ತಿದ್ದು ಅದಕ್ಕೂ ಜಗಳ -ಗಲಾಟೆಯಿಂದ ಊರು ತೊರೆಯುವ ಅಥವಾ ಮನೆ ಜಮೀನು ಮಾರಿಕೊಂಡು ಪಲಾಯನ ಮಾಡುವ ಅನಿವಾರ್ಯತೆ ಒದಗಿದೆ ಎಂದು ಇಡೀ ಕುಟುಂಬ ತಮ್ಮ ನೋವು ತೋಡಿಕೊಂಡಿದೆ.
ಕೆಲವು ದಿನಗಳ ಹಿಂದೆ ನಕಾಶೆ ರಸ್ತೆಯ ಎರಡು ಬದಿ ಗುರುತಿಸಿ ಗಡಿ ಗುರುತಿಸುವುದು ಕೋಳಾಲ ಕಂದಾಯ ಇಲಾಖೆಯ ಉಪ ತಹಶಿಲ್ದಾರ್ ಮಧು ಹಾಗೂ ಆರ್ ಐ ಅರುಣ್ ಕುಮಾರ್ ಜತೆಗೆ ತಾಲ್ಲೂಕು ಸರ್ವೆಯರ್ ನಾಗರಾಜು ಬಂದು ಸ್ಥಳ ಪರಿಶೀಲನೆ ಮಾಡಿ ಸರ್ವೆ ಕಾರ್ಯ ಸಮರ್ಪಕವಾಗಿ ಪೂರೈಸದೆ ಅರ್ಧಕ್ಕೆ ನಿಲ್ಲಿಸಿ ಪಕ್ಕದ ಜಮೀನಿನವರಿಗೆ ಹಳ್ಳಿಮರ ರಸ್ತೆ ಮಧ್ಯದಲ್ಲಿದೆ ತೆರವುಗೊಳಿಸಿ ಎಂದು ಹೇಳಿ ಹೋದವರು ಇಲ್ಲಿಯವರೆಗೂ ಯಾವುದೇ ಮಾಹಿತಿ ನೀಡದ ಕಾರಣ ನಮ್ಮ ಮನೆಗೆ ಬರುವ ರಸ್ತೆ ಪೂರ್ಣ ಒತ್ತುವರಿಯಾಗಿದ್ದು, ನಮ್ಮ ಮನೆಯ ಮೂರು ಜನ ಮಕ್ಕಳ ಶಾಲೆಗೆ ಹೋಗಲು ಎರಡು ಮೂರು ಕಿಲೋ ಮೀಟರ್ ಸುತ್ತಿ ಬರುವ ಅನಿವಾರ್ಯತೆ ತಲೆದೋರಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಒಟ್ಟಾರೆ ತಾಲ್ಲೂಕಿನ ಬಹಳಷ್ಟು ಗ್ರಾಮಗಳಲ್ಲಿ ಊರಿನ ಆಸು ಪಾಸು ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ಒಂಟಿಯಾಗಿ ವಾಸವಿರುವ ಮನೆಗಳಿಗೆ ನಕಾಶೆ ರಸ್ತೆ ಇದ್ದರೂ ಅಕ್ಕ ಪಕ್ಕದ ಜಮೀನಿನವರ ಒತ್ತುವರಿಯಿಂದ ಬಹಳಷ್ಟು ನೋವು ಅನುಭವಿಸುತ್ತಿದ್ದು, ಇತ್ತೀಚಿಗೆ ಬಂದಿರುವಂತಹ ಹೊಸ ತಹಶೀಲ್ದಾರ್ ಬಹಳ ಹುಮ್ಮಸ್ಸಿನಿಂದ ಸಾರ್ವಜನಿಕರ ಮತ್ತು ಅಸಹಾಯಕರ ನೋವುಗಳಿಗೆ ಸ್ಪಂದಿಸುತ್ತಿದ್ದು, ಇಂತಹ ಜ್ವಲಂತ ಸಮಸ್ಯೆಗಳಿಗೆ ಮೊದಲು ಪರಿಹಾರ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ.
ನಕಾಶೆ ಇದ್ದರೂ ರಸ್ತೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಕೇವಲ ಕೊರಟಗೆರೆ ತಾಲ್ಲೂಕಿನ ಸಮಸ್ಯೆಯೊಂದೇ ಇಲ್ಲ. ಈ ರೀತಿಯ ಬಹಳಷ್ಟು ಪ್ರಕರಣಗಳು ತುಮಕೂರು ಜಿಲ್ಲೆಯಾದ್ಯಂತ ರಾರಾಜಿಸುತ್ತಿವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ತೋಟದಲ್ಲಿರುವ ಒಂಟಿ ಮನೆಗಳು, ಕೆಲ ತೋಟಗಳಿಗೆ ಹೋಗಲು ರೈತರು ರಸ್ತೆ ಇಲ್ಲದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕೊರಟಗೆರೆ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಈ ರೀತಿಯ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.