ನಕಾರ ಹಿನ್ನೆಲೆ: ಇಟಲಿ ಪ್ರಧಾನಿ ರಾಜೀನಾಮೆ

ರೋಮ್, ಜು.೨೨- ಸಮ್ಮಿಶ್ರ ಸರಕಾರದ ಮಿತ್ರಪಕ್ಷಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಪ್ರಯತ್ನ ವಿಫಲವಾದ ಬಳಿಕ ಹಾಗೂ ವಿಶ್ವಾಸಮತವನ್ನು ಬೆಂಬಲಿಸಲು ಸರಕಾರದ ಮಿತ್ರಪಕ್ಷಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಇಟಲಿಯ ಜನಪ್ರಿಯ ಪ್ರಧಾನಿ ಮಾರಿಯೊ ಡ್ರಾಘಿ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುವಂತೆ ಮೈತ್ರಿಕೂಟದ ಮನವೊಲಿಸುವ ಪ್ರಯತ್ನವನ್ನು ಮಾರಿಯೊ ಡ್ರಾಘಿ ಬುಧವಾರ ನಡೆಸಿದ್ದರು. ಆದರೆ ಮೈತ್ರಿಕೂಟದ ೩ ಪ್ರಮುಖ ಪಕ್ಷಗಳು ವಿಶ್ವಾಸ ಮತದಿಂದ ದೂರ ಉಳಿಯುವ ನಿಲುವು ಬದಲಿಸದ ಹಿನ್ನೆಲೆಯಲ್ಲಿ ಡ್ರಾಘಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು ಎಂದು ವರದಿಯಾಗಿದೆ. ಸದ್ಯದ ಘಟನೆ ಹಿನ್ನೆಲೆಯಲ್ಲಿ ದೇಶದಲ್ಲೀಗ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಮಧ್ಯಂತರ ಚುನಾವಣೆ ನಡೆದರೆ ಬಲಪಂಥೀಯ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ತಮ್ಮ ಆಡಳಿತ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಡುವ ೭೪ ವರ್ಷದ ಮಾರಿಯೊ ಡ್ರಾಘಿ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಸೆರ್ಗಿಯೊ ಮ್ಯಟರೆಲಾಗೆ ಹಸ್ತಾಂತರಿಸಿದರು. ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸುವ ನಿರೀಕ್ಷೆಯಿದ್ದು ಸೆಪ್ಟಂಬರ್ ಅಥವಾ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.