ನಕಾರಾತ್ಮಕ ವಿಷಯಗಳನ್ನು ನಿರ್ಲಕ್ಷಿಸಿ, ಸಕಾರಾತ್ಮಕ ವಿಷಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು: ರುಕಮೊದ್ದೀನ್

ಬೀದರ:ಏ.18:ಇತರರ ನಕಾರಾತ್ಮಕ ವಿಷಯಗಳಿಗೆ ತಲೆ ಕೆಡಿಸಿ ಕೊಳ್ಳದೆ, ಸಕಾರಾತ್ಮಕವಾದ ವಿಷಯಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಾಗ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಸಾಹಿತಿ ಹಾಗೂ ಕಕರಸಾ ಸಂಸ್ಥೆಯ ಇನ್ಸಪೆಕ್ಟರ ರುಕಮೊದ್ದೀನ್ ರವರು ಅಭಿಪ್ರಾಯಪಟ್ಟರು.
ಎಲ್ಲರಲ್ಲೂ ಏನಾದರೊಂದು ನಕಾರಾತ್ಮಕ ಹಾಗೂ ಕೆಟ್ಟ ಗುಣ/ಸ್ವಭಾವಗಳು ಇದ್ದೇಇರುತ್ತವೆ. ಯಾರೂ ಪರಿಪೂರ್ಣರಲ್ಲ, ಯಾರೂ ಸರ್ವಜ್ಞರಲ್ಲ. ಆದ್ದರಿಂದ ಇನ್ನೊಬ್ಬರ ತಪ್ಪುಗಳನ್ನು ಎಣಿಸದೆ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಎಲ್ಲರ ಜೊತೆಗೆ ಸೌಹಾರ್ದಯುತ ವ್ಯವಹಾರ ಮಾಡಿದರೆ ಸಂಬಂಧಗಳು ಹೆಚ್ಚು ಕಾಲ ಗಟ್ಟಿಯಾಗಿ ಉಳಿಯುತ್ತವೆ ಎಂದು ತಿಳಿಸಿದರು. ಅವರು ಜೈ ಹಿಂದ್ ಹಿರಿಯ ನಾಗರಿಕರ ಸಂಫದಿಂದ ಆಯೋಜಿಸಿದ್ದ ರಾಮನವಮಿ, ಮತದಾನ ಜಾಗೃತಿ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ರವರು ಕರೆ ನೀಡಿದರು. ಮತದಾನವು ಪ್ರತಿಯೊಬ್ಬರಿಗೆ ಸಂವಿಧಾನವು ನೀಡಿದ ಹಕ್ಕು. ಯಾವುದೇ ಆಮಿಷಕ್ಕೆ ಒಳಗಾಗದೆ ಮತ ದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವನ್ನು ಗಟ್ಟಿಗೊಳಿಸ ಬೇಕೆಂದು ಅವರು ಜನತೆಗೆ ಕರೆ ನೀಡಿ, ಮತ ದಾನದ ಸಂಕಲ್ಪವನ್ನು ಬೋಧಿಸಿದರು.ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲ್ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಸಾಳೆಯವರು ಸ್ವಾಗತಿಸಿದರು. ಕೋಷಾಧ್ಯಕ್ಷರಾದ ಗಂಗಪ್ಪ ಸಾವಳೆಯವರು ಕೊನೆಯಲ್ಲಿ ವಂದಿಸಿದರು. ಸಾಮೂಹಿಕ ರಾಷ್ಟ್ರಗಾನದ ನಂತರ ಕಾರ್ಯಕ್ರಮವು ಮುಕ್ತಾಯಗೊಂಡಿತ್ತು. ರತಿನ ಕಮಲ, ಎಂ.ಜಿ. ದೇಶಪಾಂಡೆ, ರಾಜೇಂದ್ರ ಸಿಂಗ್ ಪವಾರ್, ಶಿವಪುತ್ರ ಮೆಟಗೆ, ಮಚ್ಚೆಂದ್ರ ಏಕಲಾರ್ಕರ, ಬಸವರಾಜ ಘುಳೆ, ಗುಂಡೆರಾವ ದೇಶಮುಖ, ಸಿಮ್ರಾನ, ರೇಖಾ, ರಾಮಚಂದ್ರ ಗಜ್ರೆ ಮುಂತಾದವರು ಭಾಗವಹಿಸಿದ್ದರು.