ನಕಲು ಮುಕ್ತ ಪಿಯುಸಿ ಪರೀಕ್ಷೆಗೆ ಸೂಚನೆ

ಮುದ್ದೇಬಿಹಾಳ :ಮಾ.7:ಸಧ್ಯ ಇದೇ 9 ರಂದು ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ತೀವ್ರ ಕಟ್ಟುನಿಟ್ಟಾಗಿ ಯಾವೂದೇ ಅಕ್ರಮಕ್ಕೆ ಆಸ್ಪದ ನೀಡದೇ ನಕಲು ಮುಕ್ತ ಪರೀಕ್ಷೆ ನಡೆಸಬೇಕು ಎಂದು ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಬಗಲಿ ಹೇಳಿದರು.

ಪಟ್ಟಣದ ಸರಕಾರಿ ಪಪೂ ಕಾಲೇಜಿನಲ್ಲಿ ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳ ಅಧೀನದಲ್ಲಿ ನಡೆಯುತ್ತಿರುವ ಪದವಿ ಪೂರ್ವ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿದ್ದಲ್ಲಿ ಆಡಳಿತ ಮಂಡಳಿಯವರಿಗೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪ್ರವೇಶಕ್ಕೆ ಅವಕಾಶ ನೀಡಬಾರದು.ಕೊಠಡಿಯ ಮೇಲ್ವಿಚಾರಕರನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳನ್ನು ವಿದ್ಯಾರ್ಥಿಗಳು ಪ್ರವೇಶಿಸುವಾಗ ಮೊದಲು ಪ್ರವೇಶ ದ್ವಾರದಲ್ಲಿಯೇ ಪ್ರವೇಶ ಪತ್ರ ಪರಿಶೀಲನೆ ಮಾಡಿ ಗುರುತಿನ ಪತ್ರ ನೋಡಿ ಒಳಗೆ ಬಿಡಬೇಕು.ಅನಧಿಕೃತವಾಗಿ ಯಾರಿಗೂ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಬೇಡಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೆಲ್ಲರಿಗೂ ಗುರುತಿನ ಪತ್ರವನ್ನು ಮುಖ್ಯ ಅಧೀಕ್ಷಕರು ಸಹಿಮಾಡಿ ಒದಗಿಸಬೇಕು ಎಂದು ಸೂಚಿಸಿದರು.

ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಸೆಂಟರ್‍ಗಳನ್ನು ಮುಚ್ಚಿಸಬೇಕು.ಪರೀಕ್ಷಾ ಕೇಂದ್ರದಲ್ಲಿರುವ ಉಪನ್ಯಾಸಕರುಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಪರೀಕ್ಷೆಗೆ ನಿಯೋಜಿತ ಇತರೆ ಸಿಬ್ಬಂದಿಗಳು ಕಡ್ಡಾಯವಾಗಿ ಮೋಬೈಲ್‍ನ್ನು ಉಪಯೋಗಿಸತಕ್ಕದ್ದಲ್ಲ ಎಂದು ತಿಳಿಸಲಾಯಿತು.ಪರೀಕ್ಷಾ ಕೇಂದ್ರಗಳಲ್ಲಿ ಅನ್ಯ ವ್ಯಕ್ತಿಗಳಿಗೆ ಪ್ರವೇಶ ನಿಬರ್ಂಧಿಸಿದ್ದು ಮಾಧ್ಯಮದವರಿಗೆ ಕೊಠಡಿ ಹೊರಗೆ ಭಾವಚಿತ್ರ ತೆಗೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಕಲಿ ವಿದ್ಯಾರ್ಥಿಗಳೇನಾದರೂ ಪರೀಕ್ಷಾ ಕೇಂದ್ರದಲ್ಲಿ ಕಂಡು ಬಂದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು,ಸಹ ಮುಖ್ಯ ಅಧೀಕ್ಷಕರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ,ಬಿಇಓ ಎಸ್.ಜೆ.ನಾಯಕ,ಶಿರಸ್ತೇದಾರ ವಿರೇಶ ತೊನಶ್ಯಾಳ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ,ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ ಇದ್ದರು.ಪ್ರೊ.ಐ.ಬಿ.ಹಿರೇಮಠ ನಿರೂಪಿಸಿದರು.ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.


ಸಿಸಿಟಿವಿ ಚಾಲನೆಯಲ್ಲಿ ಇರದಿದ್ದರೆ ಶಿಸ್ತು ಕ್ರಮ :

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳು ಪರೀಕ್ಷೆ ನಡೆಯುವ ಸಂದರ್ಭದಲ್ಲಿನ ಎಲ್ಲಾ ಕೊಠಡಿಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೆನ್‍ಡ್ರೈವ್‍ನಲ್ಲಿ ಶೇಖರಿಸಿಕೊಂಡು ಪ್ರತಿ ಪರೀಕ್ಷೆ ಮುಗಿದ ನಂತರ ಡಿಸಿ ಕಛೇರಿಗೆ ಹಾಗೂ ಉಪ ನಿರ್ದೆಶಕರ ಕಛೇರಿಗೆ ಸಲ್ಲಿಸಲು ತಿಳಿಸಲಾಯಿತು.ಒಂದು ವೇಳೆ ದೃಶ್ಯಾವಳಿಗಳನ್ನು ಸೇರೆ ಹಿಡಿದು ನೀಡದೇ ಇದ್ದಲ್ಲಿ ಅಂತಹ ಕಾಲೇಜಿನ ಪ್ರಾಚಾರ್ಯರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಡಿಡಿಪಿಯು ಬಗಲಿ ತಿಳಿಸಿದರು.


ಪರೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ?

ಮಾ.9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳುತ್ತಿದ್ದರೆ ಮಾ.13 ರಿಂದ ಬೋರ್ಡ್ ಪರೀಕ್ಷೆಗಳು ನಡೆಯಲಿವೆ.

ಆದರೆ ಐದನೇ ಮತ್ತು ಎಂಟನೇ ತರಗತಿ ಪರೀಕ್ಷೆಗಳು ಬೋರ್ಡ್ ಪರೀಕ್ಷೆಗಳಾಗಿರುವ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದೇ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಆಗುವ ಸಾಧ್ಯತೆ ಇದೆ ಎಂದು ಬಿಇಓ ಎಸ್.ಜೆ.ನಾಯಕ ಪ್ರಸ್ತಾಪಿಸಿದರು.ಇದಕ್ಕೆ ಸಹಮತ ವ್ಯಕ್ತಪಡಿಸದ ಡಿಡಿಪಿಯು ಬಗಲಿ,ರಾಜ್ಯಮಟ್ಟದಲ್ಲಿ ಪಿಯುಸಿ ಪರೀಕ್ಷೆಗಳು ನಡೆದರೆ ಜಿಲ್ಲಾ ಮಟ್ಟಕ್ಕೆ ಸಿಮೀತವಾಗಿರುವಂತೆ ಬೋರ್ಡ ಪರೀಕ್ಷೆಗಳು ನಡೆಯುತ್ತವೆ.ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ನಾನು ಪತ್ರ ಬರೆದು ತರುತ್ತೇನೆ.ನೀವು ನೀವು ಬೇಕಿದ್ದರೆ ಮಾತನಾಡಿ ಸಮಯ ಹೊಂದಿಸಿಕೊಳ್ಳಿ ಎಂದು ಹೇಳಿದ್ದು ಪಿಯುಸಿ ಹಾಗೂ ಬೋರ್ಡ್ ಪರೀಕ್ಷೆಗಳಿಗೆ ಸಿಬ್ಬಂದಿ ಕೊರತೆ ಉಂಟಾಗುವ ಸಮಸ್ಯೆ ಸಭೆಯಲ್ಲಿ ವ್ಯಕ್ತವಾಯಿತು.