ನಕಲು ಮುಕ್ತ ಪರೀಕ್ಷೆ ನಡೆಯಲು ಕ್ರಮ ವಹಿಸಿ :ಎಸ್ಸೆಸ್ಸೆಲ್ಸಿ ಪರೀಕ್ಷೆ ವೆಬ್‍ಕಾಸ್ಟಿಂಗ್ ನಡೆಯಲಿದೆ : ಚಂದ್ರಶೇಖರ್

ಸಂಜೆವಾಣಿ ವಾರ್ತೆ
ಔರಾದ್ :ಮಾ.23: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್‍ಕಾಸ್ಟಿಂಗ್, ಸಿಸಿ ಕ್ಯಾಮೆರಾ ಪದ್ಧತಿ ಅಳವಡಿಸಲಾಗಿದೆ. ಆದ್ದರಿಂದ ಕೊಠಡಿ ಮೇಲ್ವಿಚಾರಕರು ಜಾಗರೂಕರಾಗಿ ಕಾರ್ಯನಿರ್ವಹಿಸಬೇಕು ಎಂದು ಕಲಬುರಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ನಿರ್ದೇಶಕ ಎಚ್.ಸಿ ಚಂದ್ರಶೇಖರ ಹೇಳಿದರು.
ಪಟ್ಟಣದ ಸರ್.ಎಂ ವಿಶ್ವೇಶ್ವರಯ್ಯ ಪ್ರೌಢ ಶಾಲೆಯಲ್ಲಿ ಗುರುವಾರ ತಾಲೂಕಿನ ಕೊಠಡಿ ಮೇಲ್ವಿಚಾರಕರಿಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷಾ ಮಾರ್ಗಸೂಚಿ ಬದಲಾವಣೆಗಳೊಂದಿಗೆ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೊಳಿಸಿದೆ ಎಂದರು.
ಪರೀಕ್ಷೆಯ ಪಾವಿತ್ರ್ಯತೆ, ನೈತಿಕತೆ ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯ ಬಹಳ ಎಚ್ಚರಿಕೆಯಿಂದ ನಿರ್ವಹಿಸಿ ಎಂದು ಸಲಹೆ ನೀಡಿದರು.
ಈ ಹಿಂದೆ ಬೀದರನಲ್ಲಿ ನಾನು ಡಿಡಿಪಿಐ ಇರುವಾಗ ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದ್ದು, ನಂತರ ಅದನ್ನು ಸತತ ಪ್ರಯತ್ನದಿಂದ 34ನೇ ಸ್ಥಾನದಿಂದ 28 ಸ್ಥಾನಕ್ಕೆ ತರಲಾಗಿದೆ ಎಂದು ಸ್ಮರಿಸಿದರು. ನೀವು ನೀಡಿರುವ ಶಿಕ್ಷಣದಂತೆ ನಿಮ್ಮ ಮಕ್ಕಳ ಫಲಿತಾಂಶ ಬರಲಿದೆ ಎಂದರು. ಮಕ್ಕಳಿಗಿರುವ ಭಯ ಹೊಗಲಾಡಿಸಿ, ಪರೀಕ್ಷೆಯನ್ನು ಹಬ್ಬದಂತೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಬಿಇಒ ಟಿಆರ್ ದೊಡ್ಡೆ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ಸದ್ಧತೆ ಮಾಡಿಕೊಳ್ಳಲಾಗಿದೆ. ಔರಾದ್-ಕಮಲನಗರ ತಾಲೂಕಿನಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಕೇಂದ್ರದಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 155 ಪರೀಕ್ಷಾ ಕೊಠಡಿಗಳಿವೆ. ಅದಕ್ಕಾಗಿ 200 ಜನ ಮೇಲ್ವಿಚಾರಕರ ನೇಮಕ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಈಶ್ವರ ಕ್ಯಾದೆ, ಇಸಿಒ ಬಲಭೀಮ ಕುಲಕರ್ಣಿ, ಡಾ. ಶಾಲಿವಾನ ಉದಗೀರೆ, ನಾಗೇಂದ್ರ ಬಿರಾದಾರ್, ಕೃಷ್ಣ ಪಾಟೀಲ್, ಜ್ಯೋತಿ, ಉಮಾಕಾಂತ ಮಹಾಜನ ಸೇರಿದಂತೆ 200 ಜನ ಮೇಲ್ವಿಚಾರಕರು ಪಾಲ್ಗೊಂಡಿದ್ದರು.


ನಕಲು ಮುಕ್ತ ಪರೀಕ್ಷೆ ನಡೆಯಲಿ

ಎಲ್ಲರೂ ಸೇರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಕಲು ಮುಕ್ತವಾಗಿ ಮಾಡಬೇಕಿದೆ, ಪಾಲಕ-ಪೆÇಷಕರಿಗೆ ಶಾಲೆಯ ಶಿಕ್ಷಕರು ಜಾಗೃತಿ ಮೂಡಿಸುವ ಮೂಲಕ ಪರೀಕ್ಷೆಗೆ ಸಹಕರಿಸುವಂತೆ ತಿಳಿಸಬೇಕಿದೆ. ಅಲ್ಲದೇ ಮೇಲ್ವಿಚಾರಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.

ಎಚ್.ಸಿ ಚಂದ್ರಶೇಖರ
ಜಂಟಿ ನಿರ್ದೇಶಕರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರ್ಗಿ