ನಕಲಿ ಸಹಿ ಬಳಸಿ ೧೫ ಕೋ.ರೂ. ಎಗರಿಸಿದ ಬ್ಯಾಂಕ್ ಮ್ಯಾನೇಜರ್

ಮುಂಬೈ, ಫೆ.೨೬- ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್‌ನ ಮ್ಯಾನೇಜರ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ನನ್ನ ಖಾತೆಯಿಂದ ಸುಮಾರು ೧.೯ ಮಿಲಿಯನ್ ಡಾಲರ್ (೧೫.೭೪ ಕೋಟಿ ರೂ.) ಮೊತ್ತವನ್ನು ಬ್ಯಾಂಕ್‌ನ ಮ್ಯಾನೇಜರ್ ನಕಲಿ ಸಹಿಗಳನ್ನು ಬಳಸಿ ವಂಚಿಸಿದ್ದಾರೆ ಎಂದು ಶ್ವೇತಾ ಶರ್ಮಾ ಎಂಬ ಮಹಿಳೆಯೊಬ್ಬರು ಇದೀಗ ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕಾದಲ್ಲಿನ ನನ್ನ ಖಾತೆಯಿಂದ ಸುಮಾರು ೧.೯ ಮಿಲಿಯನ್ ಡಾಲರ್ ಮೊತ್ತವನ್ನು ನಾನು ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಐಸಿಐಸಿಐ ಬ್ಯಾಂಕ್‌ಗೆ ವರ್ಗಾಯಿಸಿದ್ದೆ. ಆದರೆ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನ ಖಾತೆಯಿಂದ ಹಣವನ್ನು ಹಿಂಪಡೆಯಲು ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ. ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದ್ದು, ಡೆಬಿಟ್ ಕಾರ್ಡ್ ಹಾಗೂ ಚೆಕ್ ಬುಕ್‌ಗಳನ್ನು ನನ್ನ ಹೆಸರಿನಲ್ಲಿಯೇ ತೆಗೆದುಕೊಂಡಿದ್ದಾರೆ. ಅವರು ನನಗೆ ನಕಲಿ ಹೇಳಿಕೆಗಳನ್ನು ನೀಡಿದರು. ನನ್ನ ಹೆಸರಿನಲ್ಲಿ ನಕಲಿ ಇಮೇಲ್ ಐಡಿಯನ್ನು ಸೃಷ್ಟಿಸಿ ಮತ್ತು ಬ್ಯಾಂಕ್ ದಾಖಲೆಗಳಲ್ಲಿ ನನ್ನ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ದಾಖಲು ಮಾಡಲಾಗಿದೆ. ಆದ್ದರಿಂದ ನನಗೆ ಹಣ ಡ್ರಾ ಮಾಡಿದ ಯಾವುದೇ ಸೂಚನೆ ಅಥವಾ ಸಂದೇಶಗಳು ಬಂದಿರಲಿಲ್ಲ ಎಂದು ಶ್ವೇತಾ ಶರ್ಮಾ ಆರೋಪಿಸಿದ್ದಾರೆ. ಇನ್ನು ದಶಕಗಳಿಗೂ ಹೆಚ್ಚಿನ ಕಾಲ ಅಮೆರಿಕಾ ಹಾಗೂ ಹಾಂಕಾಂಗ್‌ನಲ್ಲಿ ನೆಲೆಸಿದ್ದ ಶ್ವೇತಾ ದಂಪತಿ, ೨೦೧೬ರಲ್ಲಿ ಭಾರತಕ್ಕೆ ಹಿಂತಿರುಗಿದ್ದರು. ಅಮೆರಿಕಾದಲ್ಲಿನ ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವು ಅತ್ಯಲ್ಪವಾಗಿರುವುದರಿಂದ ಭಾರತದ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವಂತೆ ದಂಪತಿಗೆ ಸಲಹೆ ನೀಡಲಾಗಿತ್ತು.

ಮಹಿಳೆಗೆ ವಂಚನೆಯಾಗಿರುವುದು ನಿಜ. ಆದರೆ ನಮ್ಮದು ಲಕ್ಷಾನುಗಟ್ಟಲೆ ಖಾತೆದಾರರಿಂದ ಕೋಟ್ಯಂತರ ರೂ. ಮೊತ್ತವನ್ನು ಠೇವಣಿ ಹೊಂದಿರುವ ಪ್ರಖ್ಯಾತ ಬ್ಯಾಂಕ್ ಆಗಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಸೂಕ್ತ ಶಿಕ್ಷೆಯಾಗಲಿದೆ.
-ಐಸಿಐಸಿಐ ಬ್ಯಾಂಕ್ ವಕ್ತಾರರು