
ಗಬ್ಬೂರು,ಮಾ.೨೪- ದೇವದುರ್ಗ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಹಾಗೂ ಹೋಬಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ.ಇದನ್ನು ತಡೆಯುವಲ್ಲಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಬನದೇಶ ಪಾಟೀಲ್ ವಿಫಲವಾಗಿದ್ದಾರೆ.ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದರು.
ತಾಲೂಕು ಸೇರಿದಂತೆ ಪ್ರತಿ ಗ್ರಾಮಗಳಲ್ಲಿಯೂ ಮಾನ್ಯತೆ ಪಡೆಯದವರು ಕ್ಲಿನಿಕ್ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ.ಕೆಲವರು ಕಣ್ಣು ಕಳೆದುಕೊಂಡ ಉದಾಹರಣೆಗಳು ಇವೆ.ಬಳಿಕ ಜನ ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜ್ಞಾವಂತರ ಮಾತಾಗಿದೆ.
ಕಳಪೆ ಗುಣಮಟ್ಟದ ಔಷಧಿಗಳನ್ನು ನೀಡಲಾಗುತ್ತಿದೆ.ದೇವದುರ್ಗ ತಾಲೂಕಿನ ಕಾಕರಗಲ್ ಗ್ರಾಮದಲ್ಲಿ ಮನೆಯಲ್ಲಿಯೇ ಕ್ಲಿನಿಕ್ ನಡೆಸುವ ಬಂಗಾಲಿ ವೈದ್ಯರು ಎಂದು ಸುಳ್ಳು ಹೇಳಿಕೊಂಡು ಜನರನ್ನು ಮೋಸ ಮಾಡುತ್ತಿದ್ದಾರೆ.ಈ ಸಂಬಂಧ ಹಲವು ಬಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಆಯುಷ್ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದರು.