ನಕಲಿ ವೈದ್ಯರಿಂದ ಪರಿಸ್ಥಿತಿ ಲಾಭ-ಆರೋಪ

ಕನಕಪುರ.ಮೇ೨೮: ಪರಿಸ್ಥಿತಿಯ ಲಾಭ ಪಡೆಯಲು ಕೆಲವು ನಕಲಿ ವೈದ್ಯರು ಮರಳವಾಡಿಯಲ್ಲಿ ಕ್ಲಿನಿಕ್ ತೆರೆದು ಅಮಾಯಕ ಜನರ ಜೀವದ ಜತೆ ಆಟವಾಡುತ್ತಿದ್ದಾರೆ. ಕೊರೊನಾ ಸೋಂಕಿನ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ಕೊಡದೆ ಮುಚ್ಚಿಡುತ್ತಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಂಚಾಯಿತಿ ಸದಸ್ಯ ನಾಗರಾಜು ಒತ್ತಾಯಿಸಿದರು.
ತಾಲ್ಲೂಕಿನ ಮರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷ ಚಲುವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಜಾಗೃತಿ ತುರ್ತು ಸಭೆಯಲ್ಲಿ ಮಾತನಾಡಿದರು.
ಕೊರೊನಾ ಸೋಂಕು ಗ್ರಾಮ ಮಟ್ಟದಲ್ಲಿ ಸಮುದಾಯಕ್ಕೆ ಹರಡಿದೆ. ರೋಗಿಗಳು ತಲೆ ನೋವು, ಮೈಕೈ ನೋವು ಎಂದು ಬಂದರೆ ಅವರಿಗೆ ಕೊರೊನಾ ಟೆಸ್ಟ್ ಮಾಡಿಸದೆ ಇವರುಗಳೇ ಟ್ರೀಟ್‌ಮೆಂಟ್ ಕೊಡುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಇಲ್ಲಿನ ಕ್ಲಿನಿಂಗ್ ನಡೆಸುತ್ತಿರುವ ನಕಲಿ ವೈದ್ಯರುಗಳೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಮರಳವಾಡಿ ಹೋಬಳಿ ಕೇಂದ್ರವಾಗಿರುವುದರಿಂದ ಇಲ್ಲಿಗೆ ನೂರಾರು ಜನ ಬರುತ್ತಾರೆ. ಯಾರು ಎಲ್ಲಿಂದ ಬರುತ್ತಾರೆ ಎಂಬುದು ಗೊತ್ತುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ಬರುವವರ ಹಾಗೂ ಸೋಂಕಿನ ಲಕ್ಷಣ ಇರುವವರ ಮಾಹಿತಿಯನ್ನು ಪಂಚಾಯಿತಿಗೆ, ಆರೋಗ್ಯ ಇಲಾಖೆಗೆ ನೀಡಬೇಕೆಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದರೂ ನಕಲಿ ವೈದ್ಯರು ಅದನ್ನು ಪಾಲನೆ ಮಾಡದೆ ಬೇಜಬ್ದಾರಿತನ ತೋರುತ್ತಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಾಗರಾಜ್ ಅವರ ಮಾತಿಗೆ ಧ್ವನಿಗೂಡಿಸಿದ ಪಂಚಾಯಿತಿ ಉಪಾಧ್ಯಕ್ಷೆ ಖನಿಷಾ ಫಾತಿಮಾ ಮರಳವಾಡಿಯಲ್ಲಿ ಹಲವು ಕ್ಲಿನಿಕ್‌ಗಳಲ್ಲಿ ವೈದ್ಯರೆನಿಸಿಕೊಂಡವರು ಯಾವುದೆ ಡಾಕ್ಟರ್ ಸರ್ಟಿಪಿಕೇಟ್ ಪಡೆಯದೆ ಎಲ್ಲಿಯೋ ಮಾಡಿದ ಅನುಭವವನ್ನು ಬಳಸಿಕೊಂಡು ತಮಗೆ ತೋಚಿದ ರೀತಿಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಅವರ ಕ್ಲಿನಿಕ್ ಮುಚ್ಚಿಸಿ ಜನರ ಜೀವ ಕಾಪಾಡಬೇಕೆಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೊಡ್ಡರಂಗೇಗೌಡ ಮರಳವಾಡಿಯಲ್ಲಿ ಕ್ಲಿನಿಕ್ ತೆರೆದಿರುವ ಎಲ್ಲರಿಗೂ ತುರ್ತು ನೋಟಿಸ್ ಕೊಟ್ಟು ಸಭೆಗೆ ಬರುವಂತೆ ಕರೆಸಿ, ಸದ್ಯಕ್ಕೆ ನಿಮ್ಮ ಕ್ಲಿನಿಕ್ ಬಂದ್ ಮಾಡಬೇಕು, ಮೊದಲು ನೀವು ಪಂಚಾಯಿತಿಗೆ ನಿಮ್ಮ ದಾಖಲಾತಿಗಳನ್ನು ಕೊಟ್ಟು ಪಂಚಾಯಿತಿಯು ಅನುಮತಿ ಕೊಡುವ ತನಕ ತೆರೆಯಬಾರದು, ಒಂದು ವೇಳೆ ತೆಗೆದರೆ ಪಂಚಾಯಿತಿಯಿಂದಲೇ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿ ಕಳಿಸಿದರು.
ಕೊರೊನಾ ಸೋಂಕು ತಡೆಗಾಗಿ ಗ್ರಾಮ ಮಟ್ಟದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿವಹಿಸಬೇಕು, ಯಾವುದೆ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಪಂಚಾಯಿತಿ ಗಮನಕ್ಕೆ ತರಬೇಕು, ಸೋಂಕಿತರ ನಡುವೆ ಕೆಲಸ ಮಾಡುವವರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದರು. ಪಂಚಾಯಿತಿ ಅಧ್ಯಕ್ಷ ಚಲುವರಾಜು, ಉಪಾಧ್ಯಕ್ಷೆ ಖನಿಷಾ ಫಾತಿಮಾ, ಕಾರ್ಯದರ್ಶಿ ಮೀನಾಕ್ಷಿ, ಪಂಚಾಯಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.