ನಕಲಿ ಮದ್ಯ ಸೇವಿಸಿ ಐವರು ಸಾವು

ಅಲಿಗಢ್ (ಉತ್ತರ ಪ್ರದೇಶ),ಜೂ.3- ನಕಲಿ ಮದ್ಯ ಸೇವಿಸಿ ಕನಿಷ್ಠ ಐವರು ಮೃತಪಟ್ಟು, 22 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಸಮೀಪದ ರೋಹೆರಾದಲ್ಲಿ ನಡೆದಿದರ.
ಜವಾನ್ ಪ್ರದೇಶದ ರೋಹೆರಾ ಗ್ರಾಮದ ಬಳಿಯ ಕಾಲುವೆಯಲ್ಲಿ ಎಸೆದಿದ್ದ ನಕಲಿ‌ ಮದ್ಯ ಸೇವಿಸಿ ಇಟ್ಟಿಗೆ ಗೂಡು ಕಾರ್ಮಿಕರು ಅಸ್ವಸ್ಥರಾಗಿದ್ದು, ಕನಿಷ್ಠ 5 ಮಂದಿ ಸಾವನ್ನಪ್ಪಿದ್ದಾರೆ.
ನಕಲಿ ಮದ್ಯದ ವ್ಯಾಪಾರದಲ್ಲಿ ತೊಡಗಿರುವ ಕೆಲ ವ್ಯಕ್ತಿಗಳು ದಾಳಿಯ ಭಯದಿಂದ ಮದ್ಯವನ್ನು ಕಾಲುವೆಯಲ್ಲಿ ಎಸೆದಿದ್ದಾರೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಅಸ್ವಸ್ಥಗೊಂಡಿದ್ದವರನ್ನು ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ.ಹ್ಯಾರಿಸ್ ಮಂಜೂರ್​​, ಈವರೆಗೆ ಐವರು ಮೃತಪಟ್ಟಿದ್ದಾರೆ. 22 ಮಂದಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ಮುಂಚೆಯೇ ಕರೆ ತಂದಿದ್ದರೆ ಹೆಚ್ಚಿನ ಜೀವಗಳನ್ನು ಉಳಿಸಬಹುದಿತ್ತು ಎಂದು ಮಂಜೂರ್ ಹೇಳಿದ್ದಾರೆ.
ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 28 ರಿಂದ 87 ಮೃತದೇಹಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, 35 ಜನರು ಅಕ್ರಮ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ.
ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಣ್ಣಿನ ತಜ್ಞ ಡಾ.ಜಿಯಾ ಸಿದ್ದಿಕಿ ಪ್ರಕಾರ, ತೀವ್ರ ಕಣ್ಣಿನ ಹಾನಿಯಿಂದ ಬಳಲುತ್ತಿರುವ ಆರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ತೀವ್ರ ಸ್ವರೂಪದ ತೊಂದರೆ ಅನುಭವಿಸಿದ್ದಾರೆ.
ಉಳಿದ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ. ಈವರೆಗೆ 16 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.