ನಕಲಿ ಬೇಡ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ವಿತರಣೆ ವಿರೋಧಿಸಿ ಆ. 8ರಂದು ಧರಣಿ

ಕಲಬುರಗಿ.ಜು.27: ನಕಲಿ ಬೇಡ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ವಿತರಿಸಬಾರದು ಎಂದು ಒತ್ತಾಯಿಸಿ ಆಗಸ್ಟ್ 8ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನ ಧರಣಿ ಸತ್ಯಾಗ್ರಹ ಕೈಗೊಂಡು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ನಕಲಿ ಬೇಡ ಜಂಗಮರ ವಿರೋಧಿ ವೇದಿಕೆ- ಕರ್ನಾಟಕ ಸಂಚಾಲಕ ಮಂಡಳಿಯ ಪ್ರಮುಖ ಅರ್ಜುನ್ ಭದ್ರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ದೂರದೃಷ್ಟಿ ಮತ್ತು ಸ್ವಾತಂತ್ರ್ಯ ಚಳುವಳಿಯು ಸೃಷ್ಟಿಸಿದ ಸಮಾನತೆಯ ಆಶಯದ ಬಲದ ಮೇಲೆ ದೇಶದ ಆಳುವವರು ಕೂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀತಿಯನ್ನು ಸಂವಿಧಾನದ ಭಾಗವಾಗಿ ಒಪ್ಪಿಕೊಂಡು ಪಾಲಿಸಲಾಗಿದೆ. ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನ ಮೇಲೆ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅಗ್ರಹಿಸಿ ನಕಲಿ ಬೇಡ ಜಂಗಮರು ಬೀದಿಗಿಳಿದು ಹೋರಾಟ ಮಾಡುತ್ತಿರುವುದರ ಹಿಂದೆ ಅಸ್ಪøಶ್ಯ ಸಮುದಾಯದ ಏಳಿಗೆ ಬಯಸದ ಸಮಾಜಘಾತುಕ ಶಕ್ತಿ ಇದೆ ಎಂದು ಗಂಭೀರ ಆರೋಪ ಮಾಡಿದರು.
ಸಂವಿಧಾನಿಕವಾಗಿ ತಮ್ಮ ಹಕ್ಕನ್ನು ಕೇಳುವುದು ತಪ್ಪಲ್ಲ. ಆದಾಗ್ಯೂ, ಬೇರೆಯವರ ಸಂವಿಧಾನಿಕ ಹಕ್ಕು ಮತ್ತು ಸೌಲತ್ತು ಕೇಳುವುದು ದರೋಡೆಕೋರ ಪ್ರವೃತ್ತಿಯಾಗುತ್ತದೆ. ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನ ಮೇಲೆ ನಕಲಿ ಬೇಡ ಜಂಗಮರು ಹುಚ್ಚಾಟ ಆರಂಭಿಸಿದ್ದಾರೆ. ಅವರು ಪರಿಶಿಷ್ಟ ಜಾತಿ ಮೀಸಲಾತಿ ಕಬಳಿಸುವ ಹುನ್ನಾರದಿಂದ ಸಂಚು ರೂಪಿಸುತ್ತಿದ್ದಾರೆ. ಬಲಾಡ್ಯರು ಅಶಕ್ತರೊಂದಿಗೆ ಊಟ ಹಂಚಿಕೊಳ್ಳಲು ನಡೆಸಿರುವ ಹವಣಿಕೆ ಇದು ಎಂದು ಅವರು ಕಟುವಾಗಿ ಟೀಕಿಸಿದರು.
ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಿಗೆ ಮಾತ್ರ ಮೀಸಲಾತಿಯನ್ನು ಒದಗಿಸಿದೆ. ಇದು ಅನುಚ್ಛೇದ 15(4) ಮತ್ತು 16(4)ರ ಮೂಲಕ ಆಯಾ ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಯಾವ ಪ್ರಮಾಣದಲ್ಲಿ ಇದೆಯೇ ಆ ಪ್ರಮಾಣದಲ್ಲಿ ಮೀಸಲಾತಿ ಒದಗಿಸಲು ಅನುಚ್ಛೇದಗಳು ಅವಕಾಶ ನೀಡುತ್ತವೆ. ಈ ಸಮುದಾಯಕ್ಕೆ ಡಾ. ಅಂಬೇಡ್ಕರ್ ಅವರು ಹೋರಾಟದ ಮೂಲಕ ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಕಲ್ಪಿಸಲು ಸಫಲರಾಗಿದ್ದಾರೆ. ಪರಿಶಿಷ್ಟ ಜಾತಿ 102ರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 19 ಬೇಡ ಜಂಗಮ, ಬುಡಜಂಗಮ ಜಾತಿ ಇದ್ದು, ಇದು ಅಸ್ಪøಶ್ಯ ಸಮುದಾಯವಾಗಿದೆ. ಬೇಡ ಜಂಗಮರ ಸಂವಿಧಾನಾತ್ಮಕ ಹಕ್ಕು ಬಾದ್ಯತೆಗಳನ್ನು ಕರ್ನಾಟಕ ರಾಜ್ಯದ ಕೆಲ ಹಿತಾಸಕ್ತಿ ಜನರು ಕಿಡಿಗೇಡಿತನ ಸುದ್ದಿಗಳನ್ನು ಪ್ರಕಟಿಸಿ ಬೇಡ ಜಂಗಮ ಪದಕ್ಕೆ ಪೂರ್ವ ಪ್ರಯತ್ನಗಳ ಅರ್ಥ ಕಟ್ಟಿಸಿ, ಅಲೆಮಾರಿ ಜನರ ಜಾತಿ ಎಂದು ಕಲ್ಪಿಸಿ ಕಥೆ ಕಟ್ಟಿ ನಕಲಿ ಬೇಡ ಜಂಗಮರು ತಮ್ಮ ಪುಸ್ತಕಗಳಲ್ಲಿ ಬುಡಗ ಜಂಗಮ ಸುಳ್ಳು ವದಂತಿಗಳನ್ನು ಹರಡಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಮನುಷ್ಯ ಶರೀರ ರಚನಾಶಾಸ್ತ್ರ ಸಮೀಕ್ಷೆಯಿಂದ ನರಕುಲ ವಿಜ್ಞಾನದ ಕಾನೂನು ಸ್ಥಾನಮಾನದ ಟಿಪ್ಪಣೆಗಳು 1970ರಿಂದ ಆರಂಭವಾಗಿ 1971, 1993, 1998 ಭಾರತದಲ್ಲಿ ಮನುಷ್ಯ ಶರೀರ ರಚನಾಶಾಸ್ತ್ರ ಪ್ರಕಟಣೆಯಲ್ಲಿ ಬೇಡ ಜಂಗಮರು ಯಾರು ಎಂಬುದನ್ನು ಸ್ಪಷ್ಟಪಡಿಸಿ ಕರ್ನಾಟಕದಲ್ಲಿ ನಕಲಿ ಬೇಡ ಜಂಗಮರು, ನಕಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯುವುದರ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಇದು ವಾಸ್ತವವಾಗಿ ದಲಿತರನ್ನು ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ತುಳಿಯುವ ಉದ್ದೇಶಿತ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದರು.
ಇದಕ್ಕೆ ಮೇಲ್ಜಾತಿಯ ಪ್ರಾಬಲ್ಯದ ಎಲ್ಲ ರಾಜಕೀಯ ಪಕ್ಷಗಳ ಬೆಂಬಲವಿದೆ. ಕರ್ನಾಟಕದಲ್ಲಿ ನಕಲಿ ಬೇಡ ಜಂಗಮರು, ಬೇಡ ಜಂಗಮ ಪ್ರಾಮಾಣಪತ್ರಕ್ಕಾಗಿ ಹೋರಾಟ ಮಾಡುತ್ತಿರುವುದು, ಹೋರಾಟದ ನೇತೃತ್ವ ವಹಿಸಿರುವ ಮಠಾಧೀಶರು ಮತ್ತು ಸ್ವಾಮಿಗಳಿಗೆ ಮಾಧ್ಯಮಗಳು ಅವರನ್ನು ಶ್ರೀಗಳೆಂದು ಎನ್ನುತ್ತದೆ. ಅವರಿಗೆ ಮಾಧ್ಯಮಗಳು ಜಾತಿ ಶ್ರೀಗಳೆಂದು ಕರೆದರೆ ಹೆಚ್ಚು ಸೂಕ್ತ ಎಂದು ಅವರು ಹೇಳಿದರು.
1995ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ (ದೌರ್ಜನ್ಯ ತಡೆ) ಕಾನೂನಿನ್ವಯ ರಕ್ಷಣಾ ಘಟಕ ಸ್ಥಾಪಿಸಿ, ಸಂವಿಧಾನ ಬಾಹಿರವಾಗಿ ದಲಿತರ ಹಕ್ಕುಗಳಿಗೆ ಧಕ್ಕೆ ತರುತ್ತಿರುವ ನಕಲಿ ಬೇಡ ಜಂಗಮರು ಬೇಡ ಜಂಗಮ ಜಾತಿ ಪ್ರಮಾಣಪತ್ರದ ಸಲುವಾಗಿ ಹೊರಾಟ ಮಾಡುವವರ ಮೇಲೆ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಈಗಾಗಲೇ ನಕಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ನೌಕರಿ ಪಡೆದವರನ್ನು ಪತ್ತೆ ಹಚ್ಚಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಡಿಜಿಪಿ ಡಾ. ರವೀಂದ್ರನಾಥ್ ಅವರ ವರದಿಯನ್ನು ಪರಿಗಣಿಸುವಂತೆ, ನಕಲಿ ಬೇಡ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸದಂತೆ ಒತ್ತಾಯಿಸಿದ ಅವರು, ಈ ಎಲ್ಲ ಬೇಡಿಕೆಗಳನ್ನು ಇಡೇರಿಸಲು ಆಗ್ರಹಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಸತ್ಯಾಗ್ರಹದಲ್ಲಿ ಬೌದ್ಧ ಗುರುಗಳು, ಮಾದಿಗ, ಡೋರ, ಭೋವಿ (ವಡ್ಡರ), ಬಂಜಾರಾ, ವಾಲ್ಮೀಕಿ ಸಮುದಾಯಗಳ ಮಠಾಧೀಶರು ಹಾಗೂ ಹಲವಾರು ಧಾರ್ಮಿಕ ಸಮುದಾಯದ ಮುಖಂಡರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಣಮಂತ್ ಬೋಧನಕರ್, ಸುಧಾಮ್ ಧನ್ನಿ, ಸಂತೋಷ್ ಮೇಲಿನಮನಿ, ಬಸಲಿಂಗಪ್ಪ ಗಾಯಕವಾಡ್ ಮುಂತಾದವರು ಉಪಸ್ಥಿತರಿದ್ದರು.