ನಕಲಿ ಬಿಲ್ಲುಗಳ ಹಾವಳಿ ನಿಯಂತ್ರಿಸಿ ಎಂದು ಲಾರಿ ಮಾಲೀಕರ ಸಂಘ ಒತ್ತಾಯ


ಸಂಜೆವಾಣಿ ವಾರ್ತೆ
ಕುರುಗೋಡು:ಏ.05: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿನ ಹಾರು ಬೂದಿಯನ್ನು ಲಾರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಸರಬರಾಜು ಮಾಡಬಾರದು, ಸ್ಥಳೀಯ ಲಾರಿ ಮಾಲಿಕರ ಲಾರಿಗಳಿಗೆ ಮಾತ್ರ ಹಾರು ಬೂದಿಯನ್ನು ಸರಬರಾಜು ಮಾಡಲು ಆವಕಾಶ ನೀಡಬೇಕು, ಲಾರಿಗಳ ಬಾಡಿಗೆ ದರವನ್ನು ಹೆಚ್ಚಿಸಬೇಕು ಹಾಗೂ ಬೂದಿ ರವಾನೆಯ ದರದಲ್ಲಿನ ನಕಲಿ ಬಿಲ್ಲಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಯಬೇಕು’ ಎಂದು ಕುಡುತಿನಿ ಪಟ್ಟಣದ ಸಿವಿಲ್, ಬಲ್ಕರ್ ಮತ್ತು ಟಿಪ್ಪರ್  ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಶಿವಶಂಕರ್ ಒತ್ತಾಯಿಸಿದರು.
ತಾಲೂಕು ಸಮೀಪದ ಕುಡಿತಿನಿ ಪಟ್ಟಣದ ಇಂದಿರಾ ನಗರದ ಲಾರಿ ಮಾಲೀಕರ ಸಂಘದ ಕಚೇರಿಯ ಆವರಣದಲ್ಲಿ ಸಿವಿಲ್, ಬಲ್ಕರ್ ಮತ್ತು ಟಿಪ್ಪರ್  ಲಾರಿ ಮಾಲೀಕರ ಸಂಘದವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
 ಲಾರಿಗಳಲ್ಲಿ ನಿಗದಿತ ಪ್ರಮಾಣದ ಹಾರು ಬೂದಿಯನ್ನು ಸರಬರಾಜು ಮಾಡದೇ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಿ, ಸರ್ಕಾರಕ್ಕೆ ಭಾರಿ ಮೋಸ, ವಂಚನೆ ಮಾಡುತ್ತಿರುವ ತಪ್ಪಿತಸ್ತ ಲಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ಬಿಟಿಪಿಎಸ್ ಘಟಕದ ಅಧಿಕಾರಿಗಳು ವಿಫಲರಾಗಿದ್ದಾರೆ. ಸ್ಥಳೀಯ ಲಾರಿಗಳಿಗೆ ಮನ್ನಣೆ ನೀಡದೇ ಹೊರ ರಾಜ್ಯ, ಜಿಲ್ಲೆಯ ಲಾರಿಗಳಿಗೆ ಆವಕಾಶ ಕಲ್ಪಿಸುವುದು ಸಮಂಜಸವಲ್ಲ. ಅಧಿಕ ಭಾರದ ಲಾರಿಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹಾಳುಗುತ್ತಿವೆ ಹಾಗೂ ಎಸಿಸಿ, ಅಲ್ಟ್ರಾಟೆಕ್ ಸಿಮೇಂಟ್ ಕಂಪನಿಯ ಅಧಿಕಾರಿಗಳನ್ನು ಬಿಟಿಪಿಸ್ ಅಧಿಕಾರಿಗಳು ಕರೆಸಿ, ಸ್ಥಳೀಯ ಲಾರಿ ಮಾಲೀಕರ ಸಂಘದ ಮುಖಂಡರ ಜೊತೆಗೆ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿ, ಲಾರಿ ಮಾಲೀಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಬಿಟಿಪಿಎಸ್ ಘಟಕದ ಆವರಣದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಗ್ಯಾಂಗಿ ಹನುಮಂತಪ್ಪ, ಕ್ರೀಷ್ಣಪ್ಪ, ಮಹೇಶ್, ರಾಜೇಶ್, ಗೋಪಾಲ್, ಮಲ್ಲಿಕಾರ್ಜುನ್, ತಿಮ್ಮಪ್ಪ, ಸಿದ್ಧಪ್ಪ ಇದ್ದರು. ಕುಡುತಿನಿಯಲ್ಲಿ ಲಾರಿ ಮಾಲೀಕರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಶಿವಶಂಕರ್ ಮಾತನಾಡಿದರು.