ನಕಲಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಿ: ಪತ್ರಕರ್ತರ ಸಂಘ ಒತ್ತಾಯ

ಬಸವಕಲ್ಯಾಣ: ಆ.26:ನಗರದಲ್ಲಿ ಹೆಚ್ಚಾಗಿರುವ ನಕಲಿ ಪತ್ರಕರ್ತರ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.
ಈ ಸಂಬಂಧ ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿದ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರ ನಿಯೋಗದಿಂದ ತಹಶೀಲ್ದಾರ ಶಾಂತಗೌಡ ಬಿರಾದಾರ ಅವರಿಗೆ ಬರೆದ ಮನವಿ ಪತ್ರ ಗ್ರೇಡ್-2 ತಹಶೀಲ್ದಾರ ಪಲ್ಲವಿ ಬೆಳಕೇರೆ ಅವರಿಗೆ ಸಲ್ಲಿಸಲಾಯಿತು.
ನಗರದಲ್ಲಿ ಕಳೆದ ಕೆಲ ತಿಂಗಳಿಂದ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಅನಧಿಕೃತ ಸುದ್ದಿವಾಹಿನಿಗಳ ಲೋಗೋ ಹಿಡಿದುಕೊಂಡು ತಾವು ಪತ್ರಕರ್ತರು ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಓ ಸೇರಿದಂತೆ ವಿವಿಧ ಸಂಸ್ಥೆಗಳ ಆಡಳಿತ ಮಂಡಳಿಯವರಿಗೆ ಹಣಕ್ಕಾಗಿ ಬೇಡಿಕೆ ಇಡುವ ಮೂಲಕ ಬ್ಲಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ.
ಈ ಕುರಿತು ಈಗಾಗಲೇ ಹಲವು ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಓಗಳು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ತಕ್ಷಣ ತಾಲೂಕು ಆಡಳಿತ ಎಚ್ಚೇತ್ತುಕೊಂಡು ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕಿದೆ. ನಗರದಲ್ಲಿ ಯಾವುದೇ ಅಪರಿಚ ವ್ಯಕ್ತಿಯು ತಾನು ಪತ್ರಕರ್ತನೆಂದು ಹೇಳಿದ ಕೂಡಲೇ ಆತನ ಸಂಸ್ಥೆ ಹಾಗೂ ಪತ್ರಿಕೆಗೆ ಸಂಬಂಧಿಸಿದಂತೆ ಪರಿಶೀಲಿಸಬೇಕು.
ಪತ್ರಕರ್ತರಲ್ಲದವರು ತಮ್ಮ ವಾಹನಗಳ ಮೇಲೆ ಪ್ರೇಸ್ ಎಂದು ಬರೆದುಕೊಂಡು ಓಡಾಡುವ ನಕಲಿ ಪತ್ರಕರ್ತರ ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವಶಕ್ಕೆ ಪಡೆದು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.
ನಂತರ ನಗರದ ಸಿಪಿಐ ಕಚೇರಿಗೆ ತೆರಳಿದ ಪತ್ರಕರ್ತರ ಸಂಘದ ನಿಯೋಗದಿಂದ ಸಿಪಿಐ ಅಲಿಸಾಬ್ ಅವರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿ, ಪೊಲೀಸ್ ಇಲಾಖೆಯಿಂದ ಪರಿಶೀಲಿಸಿ ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ್ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷರಾದ ನೈಮೋದ್ದಿನ್ ಚಾಬುಕ್ ಸವಾರ್, ಪ್ರಹ್ಲಾದ್ ಡಿಕೆ, ಕಾರ್ಯದರ್ಶಿ ಶಿವಪುತ್ರ ಪಾಟೀಲ್, ಕೋಶಾಧ್ಯಕ್ಷ ಪ್ರದೀಪ್ ವಿಸಾಜಿ, ಗೌರವ ಸಲಹೆಗಾರ ವೀರಶಟ್ಟಿ ಮಲಶಟ್ಟಿ, ಪತ್ರಕರ್ತರಾದ ರಾಜೇಂದ್ರ ಗೋಖಲೆ, ಕಲ್ಯಾಣರಾವ ಮದರಗಾಂವಕರ್, ಜುಬೇರ ನವಾಜ್‍ಭಾಯಿ, ಧನರಾಜ್ ರಾಜೋಳೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.