ಬೆಂಗಳೂರು, ಜೂ.೧೯- ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕಾವೇರಿ ೨ ತಂತ್ರಾಂಶವನ್ನು ರಾಜ್ಯದ ೨೫೬ ಉಪ ನೋಂದಣಿ ಕಚೇರಿಗಳಲ್ಲಿ ಅಳವಡಿಸಲಾಗುತ್ತಿದ್ದು, ನಕಲಿ ಖಾತೆ ಹಾವಳಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಕಂದಾಯ ಸಚಿವ ಡಾ.ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ನಗರದಲ್ಲಿಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ವಿಳಂಬವಿಲ್ಲದೆ ತಮ್ಮ ದಸ್ತಾವೇಜುಗಳನ್ನು ನೋಂದಣಿ ಮಾಡಿಕೊಳ್ಳಲು ಸಹಕಾರಿಯಾಗಿದೆ. ಜೊತೆಗೆ, ಇದರಲ್ಲಿನ ಎಲ್ಲಾ ಗೊಂದಲ ನಿವಾರಣೆ ಮಾಡಲಾಗುವುದು ಎಂದರು.ಉಪನೋಂದಣಿ ಕಚೇರಿಯಿಂದ ನೀಡುವ ಇತರೆ ಸೇವೆಗಳಾದ ಋಣಭಾರ ಪತ್ರಿಕೆ, ನಕಲು ಅರ್ಜಿ, ಇತ್ಯಾದಿ ಸೇವೆಗಳನ್ನು ಸಾರ್ವಜನಿಕರು ಆನ್‌ಲೈನ್ ಮುಖಾಂತರ ಪಡೆಯಬಹುದಾಗಿದೆ. ಒಂದು ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ಉಪನೋಂದಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದರು.ರಾಜ್ಯ ವ್ಯಾಪಿಯ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಕಾವೇರಿ ೨.೦ ತಂತ್ರಾಂಶ ಅಳವಡಿಕೆ ಕೆಲಸದ ವಿಳಂಬ ತಪ್ಪಿಸಲು ಹಾಗೂ ಮಧ್ಯವರ್ತಿಗಳ ಕಡಿವಾಣಕ್ಕೆ ಕಾವೇರಿ-೨ ತಂತ್ರಾಂಶ ಅನುಕೂಲಕಾರಿ ಆಗಿದೆ.
ಇನ್ನೂ, ಆಸ್ತಿ ನೋಂದಣಿಗೆ ಸಾರ್ವಜನಿಕರು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ದಿನಗಳಗಟ್ಟಲೆ ಅಲೆದಾಡಬೇಕಾಗಿತ್ತು. ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಸಾರ್ವಜನಿಕರೇ ಆನ್‌ಲೈನ್ ಮೂಲಕ ಸುಲಭ ದಾಖಲೆಗಳನ್ನು ಕಳುಹಿಸಿಕೊಡಲಾಗುವುದು ಎಂದರು.ಹಾಗೇ, ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಕರಾರು ಮತ್ತು ವಿಲ್ ಸೇರಿದಂತೆ ಇತರೆ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಾಪತ್ರಯ ಇರುವುದಿಲ್ಲ. ಮಧ್ಯವರ್ತಿಗಳಿಲ್ಲ. ಕಾವೇರಿ-೨ ವೆಬ್‌ಸೈಟ್‌ನಲ್ಲಿಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದಾಗಿದೆ ಎಂದು ವಿವರಿಸಿದರು.ಅದೇ ರೀತಿ, ಸಿಬ್ಬಂದಿ ಕಾರ್ಯವೈಖರಿಯಲ್ಲಿ ಬದಲಾವಣೆ ಕಾವೇರಿ ತಂತ್ರಾಂಶ-೨.೦ ಬಳಕೆಯಿಂದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಯ ಕಾರ್ಯವೈಖರಿಯೂ ಸಂಪೂರ್ಣ ಬದಲಾಗಲಿದೆ. ಜತೆಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರವಾಗಲಿದೆ. ನಕಲಿ ದಾಖಲೆಗಳ ಮೂಲಕ ವಂಚನೆ ಮಾಡುವ ಮತ್ತಿತರ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಹೊಸ ತಂತ್ರಾಂಶವನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ರಾಜ್ಯ ನೋಂದಣಿ ಇಲಾಖೆಯ ಮಹಾ ಪರವೀಕ್ಷಕಿ ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ ಸೇರಿದಂತೆ ಪ್ರಮುಖರಿದ್ದರು.
ಎಲ್ಲಿ ಎಷ್ಟು…!
ಈಗಾಗಲೇ ಕಾವೇರಿ ೧ ಚಾಲ್ತಿಯಲ್ಲಿದ್ದು, ಇದರ ನಡುವೆ ಕಾವೇರಿ ೨ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಾವೇರಿ-೧ ದಿನಕ್ಕೆ ೬೦ರಷ್ಟು ನೋಂದಾಣಿ ಆದರೆ, ಕಾವೇರಿ ೨ರಲ್ಲಿ ೬೫ರಷ್ಟು ಆಗಿದೆ. ಕೆಲವೊಂದು ದಿನ ೧೩೨ ಕ್ಕೂ ಅಧಿಕ ದಾಖಲೆ ನೋಂದಣಿ ಆಗಿದೆ. ಹೀಗೆ, ಬಳ್ಳಾರಿ, ಗುಲ್ಬರ್ಗಾ, ಚಾಮರಾಜನಗರ ಸೇರಿದಂತೆ ಹಲವೆಡೆ ಕಾವೇರಿ ೨ ಗೆ ಸ್ಪಂದನೆ ವ್ಯಕ್ತವಾಗುತ್ತಿದೆ.
ಕಂದಾಯ ಆದಾಯ ನಿಂತಿಲ್ಲ..!
ಕಳೆದ ಆದಾಯ ವಾರ್ಷಿಕ ಸಾಲಿನಲ್ಲಿ ಕಂದಾಯ ಇಲಾಖೆ ಆದಾಯ ೧೩೫೨ ಕೋಟಿ ಆಗಿದ್ದು, ಇದು ಕಳೆದ ಬಾರಿ ಗಿಂತ ಸುಮಾರು ೧೩೦ ಕೋಟಿ ಅದಾಯ ಬಂದಿದೆ.