ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ೯ ಮಂದಿ ಗ್ಯಾಂಗ್ ಸೆರೆ

ಬೆಂಗಳೂರು,ನ.೯- ಶ್ರೀಲಂಕಾ ಪ್ರಜೆಗಳಿಗೆ ಹಾಗೂ ಅಪರಾಧ ಹಿನ್ನೆಲೆಯುಳ್ಳ ಕ್ರಿಮಿನಲ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತೀಯ ಪಾಸ್‌ಪೋರ್ಟ್ ಮಾಡಿಸಿಕೊಡುತ್ತಿದ್ದ ಶ್ರೀಲಂಕಾದ ಐವರು ಸೇರಿ ೯ ಮಂದಿಯ ಗ್ಯಾಂಗ್‌ನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಗ್ಯಾಂಗ್‌ನಲ್ಲಿ ಶ್ರೀಲಂಕಾದ ಐವರು, ಬೆಂಗಳೂರಿನ ಇಬ್ಬರು, ಮಂಗಳೂರಿನ ಇಬ್ಬರು ಸೇರಿ ೯ ಮಂದಿ ಆರೋಪಿಗಳಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ ಅವರು ತಿಳಿಸಿದ್ದಾರೆ.ಆರೋಪಿಗಳಲ್ಲಿ ಓರ್ವ ಖಾಸಗಿ ಪಾಸ್‌ಪೋರ್ಟ್ ಬ್ರೋಕರ್ ಆಗಿದ್ದು, ಆತನ ವಿರುದ್ಧ ಜಯನಗರ, ಡಿ.ಜೆ ಹಳ್ಳಿ, ಪುಲಿಕೇಶಿ ನಗರ, ಅನ್ನಪೂರ್ಣೇಶ್ವರಿ ನಗರ, ಭಾರತಿ ನಗರ, ಸಿಟಿ ಮಾರ್ಕೆಟ್, ಮಾದನಾಯಕನಹಳ್ಳಿ ಸೇರಿದಂತೆ ೬ ಪೊಲೀಸ್ ಠಾಣೆಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಕೊಡಿಸಿದ ಕೃತ್ಯದಡಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಆರೋಪಿಯು ತನ್ನ ಸಹಚರನಾದ ಮತ್ತೊಬ್ಬ ಆರೋಪಿಯ ಸಹಾಯದಿಂದ ಸುಳ್ಳು ವಿಳಾಸದ ನಕಲಿ ಆಧಾರ್‌ಕಾರ್ಡ್ ಮತದಾರರ ಗುರುತಿನಪತ್ರ, ಜನ್ಮದಿನಾಂಕ ದೃಢೀಕರಣಕ್ಕಾಗಿ ಶಾಲಾ ವರ್ಗಾವಣಾ ಪ್ರಮಾಣಪತ್ರವನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಿ ಪಾಸ್‌ಪೋರ್ಟ್ ಕಚೇರಿಗೆ ಸಲ್ಲಿಸಿ ಪಾಸ್‌ಪೋರ್ಟ್ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆರೋಪಿಗಳ ಗ್ಯಾಂಗ್‌ನಿಂದ ಸುಮಾರು ೫೦ ಮಂದಿಗೆ ಪಾಸ್‌ಪೋರ್ಟ್‌ಗಳು, ಚಾಲನಾ ಪರವಾನಗಿಗಳನ್ನು ಅಕ್ರಮ ಮಾರ್ಗದಿಂದ ಮಾಡಿಸಿಕೊಟ್ಟಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದರು.ಕಳೆದ ೨೦೨೦ ರಿಂದ ಇಲ್ಲಿಯವರೆಗೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಶ್ರೀಲಂಕಾ ಮೂಲದ ಪ್ರಜೆಗಳು, ೨೦ ಮಂದಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿರುವುದಾಗಿ ಬಾಯ್ದಿಟ್ಟಿದ್ದಾರೆ. ಇತರೆ ಆರೋಪಿಗಳು ಕೂಡ ಅಪರಾಧ ಹಿನ್ನೆಲೆಯಾದವರಾಗಿದ್ದು, ಮೂಲ ಹೆಸರುಗಳನ್ನು ಮರೆಮಾಚಿ ಪಾಸ್‌ಪೋರ್ಟ್ ಮಾಡಿಸಿಕೊಡುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆಎಂದು ತಿಳಿಸಿದರು.
ನಕಲಿ ದಾಖಲಾತಿಗಳನ್ನು ಸಲ್ಲಿಸಿ ಪಾಸ್‌ಪೋರ್ಟ್ ಪಡೆದ ಆರೋಪಿಗಳಲ್ಲಿ ಚಿಕ್ಕಮಗಳೂರು ಮೂಲದ ಕುಖ್ಯಾತ ಮನೆಗಳ್ಳನೊಬ್ಬ ಸೇರಿದ್ದು, ಆತನ ವಿರುದ್ಧ ೩೬ ಮನೆಗಳ್ಳತನ ಪ್ರಕರಣ ದಾಖಲಾಗಿದ್ದರೆ, ಆತನ ಸಹೋದರನ ವಿರುದ್ಧ ೧೫ ಮನೆಗಳ್ಳತನ ಪ್ರಕರಣ ದಾಖಲಾಗಿದೆ ಎಂದರು.
ನಕಲಿ ದಾಖಲೆ ಸಲ್ಲಿಸಿ ಪಾಸ್‌ಪೋರ್ಟ್ ಪಡೆದ ಮಂಗಳೂರು ಮೂಲದ ಮೂವರು ಆರೋಪಿಗಳ ವಿರುದ್ಧ ಕೊಲೆ, ಸುಲಿಗೆ, ದರೋಡೆಗಳ ಗಂಭೀರ ಪ್ರಕರಣ ದಾಖಲಾಗಿದ್ದು, ಇವರುಗಳ ವಿರುದ್ಧ ಕೋರ್ಟ್‌ನಿಂದ ವಾರೆಂಟ್ ಹಾಗೂ ಪ್ರಕ್ಲಮೇಷನ್ ಹೊರಡಿಸಲಾಗಿದೆ. ಇದಲ್ಲದೆ ೫ ಅರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದರು.ಇಲ್ಲಿಯವರೆಗಿನ ತನಿಖೆಯಿಂದ ನಕಲಿ ದಾಖಲೆಗಳನ್ನು ಸಲ್ಲಿಸಿ ಪಾಸ್‌ಪೋರ್ಟ್ ಪಡೆದಿದ್ದ ಐವರು ಆರೋಪಿಗಳು ಹಾಗೂ ಅದಕ್ಕೆ ಸಸಹಕರಿಸಿದ್ದ ನಾಲ್ವರು ಏಜೆಂಟರುಗಳನ್ನು ಬಂಧಿಸಿ ಉಳಿದ ಆರೋಪಿಗಳ ಪತ್ತೆಕಾರ್ಯವನ್ನು ಕೈಗೊಳ್ಳಲಾಗಿದೆ.
ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪಾಸ್‌ಪೋರ್ಟ್ ಪಡೆದಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಕೃಷ್ಣಕಾಂತ್ ಅವರು ಐವರು ಇನ್ಸ್‌ಪೆಕ್ಟರ್ ಸುಬ್ರಮಣ್ಯಸ್ವಾಮಿ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕೃಷ್ಣಕಾಂತ್ ಅವರಿದ್ದರು.