ನಕಲಿ ದಾಖಲೆ, ವೈದ್ಯರು-ಕ್ಲಿನಿಕ್‌ಗಳ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ

ಕೋಲಾರ,ನ,೧೦-ಕೆ.ಪಿ.ಎಂ.ಇ ಕಾಯ್ದೆಯನ್ವಯ ನೋಂದಣಿಯಾಗದೆ ಮತ್ತು ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್‌ಗಳನ್ನು ನಡೆಸುತ್ತಿರುವವರನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಅವರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೆ.ಪಿ.ಎಂ.ಇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಕಲಿ ದಾಖಲೆಗಳನ್ನು ಹೊಂದಿರುವ ೪೨ ಕ್ಲಿನಿಕ್ ಮಾಲೀಕರಿಗೆ ಕಾನೂನಿನ್ವಯ ಕಠಿಣ ಕ್ರಮ ಜರುಗಿಸಲು ಸೂಚಿಸಲಾಯಿತು.
ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ೨೦೦೭ ಹಾಗೂ ತಿದ್ದುಪಡಿ ನಿಯಮ ೨೦೧೭ ರಂತೆ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆ.ಪಿ.ಎಂ.ಇ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಖಾಸಗಿ ಆರೋಗ್ಯ ಸಂಸ್ಥೆಗಳಿಂದ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುವ ದಿನಾಂಕ ೯೦ ದಿನಗಳೊಳಗಾಗಿ ಅರ್ಜಿಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯು ಜಿಲ್ಲಾ ಕೆ.ಪಿ.ಎಂ.ಇ ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ .
ಪ್ರತಿ ಎರಡು ತಿಂಗಳಿಗೊಮ್ಮೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರಿದವರ ಆಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು. ಅದರಂತೆ ಈ ಹಿಂದೆ ನಡೆದ ಸಭೆಯಲ್ಲಿ ಯಾವುದೇ ಅರ್ಹ ವೈದ್ಯಕೀಯ ವಿದ್ಯಾರ್ಹತೆಯಿಲ್ಲದೆ ಅನಧಿಕೃತವಾಗಿ ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತಿರುವ ನಕಲಿ ವೈದ್ಯರನ್ನು ಹಾಜರು ಪಡಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ ಮೇರೆಗೆ ದಿನಾಂಕ:೦೭.೧೦.೨೦೨೩ ರಂದು ಒಟ್ಟು ೪೨ ಆರೋಗ್ಯ ಸಂಸ್ಥೆಯವರನ್ನು ಪ್ರಾಧಿಕಾರದ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿ ಒಟ್ಟು ೪೨ ಆರೋಗ್ಯ ಸಂಸ್ಥೆಗಳಲ್ಲಿ ೨೭ ಆರೋಗ್ಯ ಸಂಸ್ಥೆಯವರು ಹಾಜರಾಗಿರುತ್ತಾರೆಂದು ಆರೋಗ್ಯಾಧಿಕಾರಿ ಡಾ. ಚಂದನ್ ಸಭೆಗೆ ತಿಳಿಸಿದರು.
ಒಟ್ಟು ೪೨ ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ ಆರೋಗ್ಯ ಸಂಸ್ಥೆಗಳನ್ನು ಸೀಜ್ ಮಾಡಲು ಹಾಗೂ ಉಳಿದ ಆರೋಗ್ಯ ಸಂಸ್ಥೆಯವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ವಹಿಸಲು ಹಾಗೂ ಗೈರು ಹಾಜರಾದ ಆರೋಗ್ಯ ಸಂಸ್ಥೆಯವರನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸಲು ಮಾನ್ಯ ಜಿಲ್ಲಾಧಿಕಾರಿಗಳಿಂದ ಆದೇಶ ನೀಡಲಾಗಿದೆ.
ಬಂಗಾರಪೇಟೆ ತಾಲ್ಲೂಕಿನ ೪, ಕೆ.ಜಿ.ಎಫ್ ತಾಲ್ಲೂಕಿನ ೧೫, ಮಾಲೂರು ತಾಲ್ಲೂಕಿನ ೧, ಶ್ರೀನಿವಾಸಪುರ ತಾಲ್ಲೂಕಿನ ೭, ಮುಳಬಾಗಿಲು ತಾಲ್ಲೂಕಿನ ೨ ಹಾಗೂ ಕೋಲಾರ ತಾಲ್ಲೂಕಿನ ೧೩ ಕ್ಲಿನಿಕ್ ಮಾಲೀಕರು ಸಭೆಗೆ ಹಾಜರಾಗಿದ್ದು, ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಜನರ ಜೀವದ ಜೊತೆಗೆ ಚೆಲ್ಲಾಟವಾಡಿದ ಇವರಿಗೆ ತೀವ್ರತರವಾದ ಕಠಿಣ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ೧೫ ಸಂಸ್ಥೆಗಳವರು ಗೈರು ಹಾಜರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಒಟ್ಟು ೪೨ ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ ಕ್ಲಿನಿಕ್‌ಗಳನ್ನು ಸೀಜ್ ಮಾಡಲು ಮತ್ತು ಕ್ಲಿನಿಕ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಮುಟ್ಟುಗೋಲು ಹಾಕಿಕೊಂಡಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ತಿಳಿಯಲು ಸೈಬರ್ ಕ್ರೈಂ ವಿಭಾಗಕ್ಕೆ ಹಾಗೂ ಸಂಬಂದಿಸಿಧ ವಿಶ್ವವಿದ್ಯಾನಿಲಯಗಳಿಗೆ ಸದರಿ ಪ್ರಾಮಾಣಪತ್ರಗಳನ್ನು ಸಲ್ಲಿಸಿ ಪರಿಶೀಲನೆ ನಡೆಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ. ಎಂ, ಕೆ.ಎಸ್ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ್, ಜಿಲ್ಲಾ ಆಯುಷ ಅಧಿಕಾರಿ ಡಾ. ರಮೇಶ್ ಚಂದ್ರ, ಅರೋಗ್ಯ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಆರೋಗ್ಯಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.