ನಕಲಿ ದಾಖಲೆ ನೀಡಿ ನೌಕರಿ ಪಡೆದವರಿಗೆ ವಜಾ ಸಾಕೆ, ಶಿಕ್ಷೆ ಬೇಡವೇ

ಬಳ್ಳಾರಿ, ಅ.29: ಆರೋಗ್ಯ ಇಲಾಖೆಗೆ ಸಂಪೂರ್ಣ ನಕಲಿ ದಾಖಲೆಗಳನ್ನು ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ವ್ಯಕ್ತಿಯ ಬಂಡವಾಳ ಬಯಲಾದ ಮೇಲೆ ಆತನನ್ನು ಹುದ್ದೆಯಿಂದ ವಜಾಮಾಡಿದರೆ ಸಾಕೆ, ಶಿಕ್ಷೆ ಬೇಡವೆ ಎಂಬುದು ಸಾಮಾಜಿಕ ಹೋರಾಟಗಾರ ನಾಗರಾಜ್ ಅವರ ಪ್ರಶ್ನೆಯಾಗಿದೆ. ಅಲ್ಲದೆ ಸರ್ಕಾರಿ ಅಧಿಕಾರಿಗಳು ಅಕ್ರಮ ನೇಮಕಾತಿಯಲ್ಲಿ ಹೇಗೆ ಭಾಗಿಯಾಗುತ್ತಾರೆಂಬುದನ್ನು ಬಯಲು ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯ ಕೂಡ್ಲಿಗಿಯಲ್ಲಿನ ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕರ ಹುದ್ದಗೆ ಅರ್ಜಿ ಕರೆಯುತ್ತಾರೆ. ಪರಿಶೀಲನೆ ನಂತರ ಅಂತಿಮವಾಗಿ ಪ್ರಹ್ಲಾದ್ ಜಿ, ರಾಘವೇಂದ್ರ ಮತ್ತು ದೊಡ್ಡಬಸಪ್ಪ ಎಂಬುವ 3 ಜನರನ್ನು ಆಯ್ಕೆ ಮಾಡುತ್ತಾರೆ. ಈ ಹುದ್ದೆ ಎಸ್ಟಿಗೆ ಮೀಸಲಿರುತ್ತದೆ.
ಆಯ್ಕೆ ಸಮಿತಿ ಮೂವರಲ್ಲಿ ಪ್ರಹ್ಲಾದ ಅವರನ್ನು ಆಯ್ಕೆ ಮಾಡುತ್ತದೆ. ಆದರೆ ಆಯ್ಕೆ ಮೊದಲೇ ಅಂದಿನ ಡಿಹೆಚ್ಓ ಶಿವರಾಜ್ ಹೆಡೆ ಅಂಕಪಟ್ಟಿಗಳ ನೈಜತೆ ಬಗ್ಗೆ ಸಂಶಯ ವ್ಯಕ್ತಪಡಿಸಿರುತ್ತಾರೆ. ಆದರೂ ಸಮಿತಿ ಸರ್ವಸಮ್ಮತದಿಂದ ಆಯ್ಕೆ ಮಾಡುತ್ತದೆ.
ಆದರೆ ರಾಘವೇಂದ್ರ ಅವರ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಇಲ್ಲದ ಕಾಲೇಜಿನ ಹೆಸರಿನಲ್ಲಿ ಪಿಯುಸಿ, ಬಿಎ, ಪದವಿ, ಡಿ.ಎಂ.ಎಲ್.ಟಿ ಪ್ರಮಾಣ ಪತ್ರ ಎಲ್ಲವೂ ನಕಲಿ ಇರುವ ಬಗ್ಗೆ ದೃಢಪಡಿಸಿ ದೂರು ನೀಡಿದ್ದರಿಂದ 2019ರ ಅಕ್ಟೋಬರ್ ನಲ್ಲಿ ನೇಮಕ ಮಾಡಿದ್ದ ಪ್ರಹ್ಲಾದ್ ನನ್ನು ಜೂನ್ ನಲ್ಲಿ ವಜಾ ಮಾಡಲಾಗಿದೆ. ನಂತರ ಆತನಿಂದ ರಾಜೀನಾಮೆ ಪತ್ರ ಸಹ ಪಡೆದಿದ್ದಾರೆ. ಆತನ ಬಿ.ಎ.ಅಂಕಪಟ್ಟಿಯನ್ನು ಒಮ್ಮೆ ಗುಲ್ಬರ್ಗಾ ವಿವಿ ಅಸಲಿ ಎಂದು ಮತ್ತೊಮ್ಮೆ ನಕಲಿ ಎಂದು ನೀಡಿದೆ. ಎಸ್ಟಿಗೆ ಇದ್ದ ಹುದ್ದೆಯನ್ನು ಈಗ ಓಬಿಸಿ 2ಎ ಗೆ ಮೀಸರಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಹೀಗೆ ಅಧಿಕಾರಿಗಳು ಹಣಕ್ಕಾಗಿ, ರಾಜಕೀಯ ಒತ್ತಡಕ್ಕೆ ತಮಗೆ ಬಂದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರಹ್ಲಾದ ನಕಲಿ ದಾಖಲೆ ನೀಡಿ ನೌಕರಿ ಪಡೆದಿದ್ದಕ್ಕೆ ಶಿಕ್ಷೆ ಆಗಬೇಕು, ಆತನಿಗೆ ಸಹಕರಿಸಿದ ಅಧಿಕಾರಿಗಳ ಮೇಲೆ ವಿಚಾರಣೆ ನಡೆಯಬೇಕು. ನಿಗಧಿತ ಹುದ್ದೆಯನ್ನು ಅದೇ ವರ್ಗಕ್ಕೆ ನೀಡಬೇಕೆಂದು ನ್ಯಾಯಾಲಯದ ಮೋರೆ ಹೋಗಿರುವುದಾಗಿ ತಿಳಿಸಿದರು.