ನಕಲಿ ದಾಖಲೆ -ಕೋಟಿ ಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ವಿರುದ್ದ ಕ್ರಿಮಿನಲ್ ದೂರು ದಾಖಲು

ಕೋಲಾರ(ಜ.೧೧): ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ಶಿವನ ದೇಗುಲ, ಅಂತರಾಜ್ಯ ಪ್ರವಾಸಿ ತಾಣವಾಗಿದೆ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಿದ್ದು, ದೇಗುಲ ಯಾತ್ರಾಸ್ಥಳವಾಗಿ ರೂಪುಗೊಂಡಿದೆ. ದೇಗುಲ ಸಂಸ್ಥಾಪಕ ದಿವಂಗತ ಶ್ರೀ ಶ್ರೀ ಶ್ರೀ ಸಾಂಭವಶಿವಮೂರ್ತಿ ಸ್ವಾಮಿಗಳ ಕಾಲಾನಂತರ, ದೇಗುಲದಲ್ಲಿ ಆಸ್ತಿ ಮತ್ತು ಅಧಿಕಾರಕ್ಕಾಗಿ ದೊಡ್ಡ ಕದನವೇ ನಡೆದುಹೋಗಿದೆ. ಸ್ವಾಮೀಜಿಯವರ ಪುತ್ರ ಶಿವಪ್ರಸಾದ್ ಹಾಗೂ ಆಡಳಿತಾಧಿಕಾರಿ ಕುಮಾರಿ ಮಧ್ಯೆ ಬಹಿರಂಗ ತಿಕ್ಕಾಟಗಳೇ ನಡೆದಿವೆ. ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯಾಲಯದ ಅಂಗಳದಲ್ಲೂ ಕೆಲ ಪ್ರಕರಣಗಳ ವಾದ-ವಿವಾದ ನಡೆಯುತ್ತಿದೆ.
ಅಕ್ರಮವಾಗಿ ಸಾಗುವಳಿ ಜಮೀನು ಮಂಜೂರು ಹಿನ್ನಲೆ, ಕೋಟಿಲಿಂಗೇಶ್ವರ ದೇಗುಲದ ಆಡಳಿತಾಧಿಕಾರಿ ಕೆವಿ ಕುಮಾರಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ. ಜಮೀನು ಮಂಜೂರು ಮಾಡಲು ಸಹಕರಿಸಿದ ಶಿರಸ್ತೆದಾರ್ ಹಾಗು ಪಿಡಿಒ ರನ್ನ ಜಿಲ್ಲಾಧಿಕಾರಿ ಸತ್ಯಭಾಮ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಮ್ಮಸಂದ್ರ ಗ್ರಾಮದ ಸರ್ವೇ ನಂಬರ್ ೧ ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಸಾಗುವಳಿ ಸ್ತಳವಾಗಿದ್ದು, ಆದರೆ ೧೯೯೭ ರಲ್ಲಿ ಸ್ವಾಮೀಜಿ ಸಾಂಭವ ಶಿವಮೂರ್ತಿ ರ ಹೆಸರಿಗೆ ಮಂಜೂರಾಗಿತ್ತು.
ಅದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾಡಿಕೊಟ್ಟಿರುವುದಾಗಿ ಇದೀಗ ರುಜುವಾಗಿದೆ. ಇದೀಗ ೨೦೧೯ ರಲ್ಲಿ ಅದೇ ಜಮೀನು ಕೆವಿ ಕುಮಾರಿ ಅವರ ಹೆಸರಿಗೆ ವರ್ಗಾವಣೆ ಆಗಿದ್ದು, ಕುಮಾರಿ ಹೆಸರಿಗೆ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಪಿಡಿಒ ಇ ಸ್ವತ್ತು ಸಹ ಮಾಡಿಸಿಕೊಟ್ಟಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಇಬ್ಬರ ಅಧಿಕಾರಿಗಳ ಪಾತ್ರವು ಕಂಡುಬಂದಿದ್ದು, ಜಮೀನಿಗೆ ಈ ಸ್ವತ್ತು ಮಾಡಿಕೊಟ್ಟ ಕಮ್ಮಸಂದ್ರ ಗ್ರಾಮ ಪಂಚಾಯ್ತಿಯ ಪಿಡಿಒ ಶ್ರೀನಿವಾಸರೆಡ್ಡಿ, ಅಂದಿನ ಗ್ರಾಮ ಲೆಕ್ಕಿಗ (ಹಾಲಿ ಮುಳಬಾಗಿಲು ತಾಲೂಕಿನ ಶಿರಸ್ತೇದಾರ್) ಸಂಪತ್ ಸೇರಿದಂತೆ, ಜಮೀನು ಮಾಡಿಕೊಂಡ ಕುಮಾರಿ ಸೇರಿದಂತೆ ಮೂವರ ವಿರುದ್ದ, ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ ಮೇರೆಗೆ, ಕೆಜಿಎಪ್ ತಹಶಿಲ್ದಾರ್ ಸುಜಾತ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಕೋಟಿಲಿಂಗೇಶ್ವರ ದೇಗುಲ ಆಡಳಿತಾಧಿಕಾರಿ ಕುಮಾರಿಗೆ ಬಂಧನ ಭೀತಿ ಎದುರಾಗಿದೆ. ಇನ್ನು ಅಕ್ರಮದಲ್ಲಿ ಭಾಗಿಯಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಹಾಗೂ ಸಂಪತ್ ಇಬ್ಬರನ್ನ ಕರ್ತವ್ಯದಿಂದ ಅಮಾನತು ಮಾಡಿ ಡಿಸಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ.