
ದಾವಣಗೆರೆ: ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗುತ್ತಿದೆ. ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಜಾತಿಗೆ ಸೇರಿದವರು ಬೇಡ ಜಂಗಮರು ಎಂಬ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ರಾಜಕಾರಣದ ಚುಕ್ಕಾಣಿ ಹಿಡಿಯಲು ಹೊರಟಿರುವುದು ಖಂಡನೀಯ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ವಾರದೊಳಗೆ ಆಗದಿದ್ದರೆ ಮಾ. 13ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆಯ ಮುಖಂಡ ಹೆಚ್. ಮಲ್ಲೇಶ್ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಪರ ಸಂಘಟನೆಗಳು, ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜಿಲ್ಲೆಯ ಮಾಯಾಕೊಂಡ ಮೀಸಲು ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಪೋಸ್ಟರ್ ಅಂಟಿಸುವುದು, ಫ್ಲೆಕ್ಸ್ ಹಾಕುವುದು, ಕ್ಯಾಲೆಂಡರ್ ಡೈರಿಗಳಲ್ಲಿ ತನ್ನ ಫೋಟೊವನ್ನು ಹಾಕಿಕೊಂಡು ವಾಗೀಶ್ ಸ್ವಾಮಿ ಓಡಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.ಈ ಹಿಂದೆಯೇ ವಾಗೀಶ್ ಸ್ವಾಮಿ ವಿರುದ್ಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತವೇ ಅವರ ಪರ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ವಾಗೀಶ್ ಸ್ವಾಮಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅವರು ಬೇಡ ಜಂಗಮ ಎಂದು ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದರು. ಚಿನ್ನಸಮುದ್ರ ಶೇಖರನಾಯ್ಕ ಮಾತನಾಡಿ, ಮೀಸಲಾತಿ ಕಸಿಯಲು ಯತ್ನಿಸುತ್ತಿರುವ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತೇವೆ. ಈ ವೇಳೆ ಅಹಿತಕರ ಘಟನೆ ನಡೆದರೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ. ಬೇಡ ಜಂಗಮರು ಪ್ರಮಾಣ ಪತ್ರ ನೀಡಬಾರದು. ಸರ್ಕಾರವು ಪರಿಶಿಷ್ಟ ಜನಾಂಗದವರ ದಮನ, ತುಳಿತಕ್ಕೊಳಪಡಿಸಲು ಹುನ್ನಾರ ಮಾಡುತ್ತಿದೆ. ಕೂಡಲೇ ನಕಲಿ ಪ್ರಮಾಣ ಪತ್ರ ಪಡೆದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಸೋಮಶೇಖರಪ್ಪ, ಲಕ್ಷ್ಮಣ್ ರಾಮಾವತ್, ವೆಂಕಟೇಶ್ ಬಾಬು, ಸಂದೇಶ, ಜಿ. ಎನ್. ಮಲ್ಲಿಕಾರ್ಜುನ್ ಹಾಜರಿದ್ದರು