ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ; ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ.ಮಾ.೧೩; ಜಿಲ್ಲಾಡಳಿತ ಪರಿಶಿಷ್ಟರನ್ನು ವಂಚಿಸಿ ನಕಲಿ ಜಾತಿಗಳವರನ್ನು ರಕ್ಷಿಸುತ್ತಿದ್ದಾರೆಂದು ಆರೋಪಿಸಿ ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ವೇದಿಕೆ ಸಂಚಾಲಕ ಹೆಚ್ ಮಲ್ಲೇಶ್ ವೀರಶೈವ ಲಿಂಗಾಯತರ ಒಂದು ಉಪಜಾತಿಯಾದ ಜಂಗಮರು  ಪರಿಶಿಷ್ಟ ಬೇಡ ಜಂಗಮ ಜಾತಿಗೆ ಹೋಲಿಕೆ ಇದೆ ಎಂಬ ಕಾರಣಕ್ಕಾಗಿ ಪರಿಶಿಷ್ಟರ  ಸೌಲಭ್ಯ ಪಡೆಯಲು ಮುಂದಾಗಿರುವುದು ಖಂಡನೀಯ. ಬೇಡ ಜಂಗಮರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ನಿಜವಾದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡುತ್ತಿದ್ದಾರೆ.ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಶಾಲೆಗಳಲ್ಲಿ ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಯವರ ಸೌಲಭ್ಯಗಳನ್ನು ಪಡೆಯುವ ದುರುದ್ದೇಶದಿಂದ ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಯಾವುದೇ ದಾಖಲೆ ಆಧಾರವಿಲ್ಲದೆ ಮಕ್ಕಳ ಜಾತಿಯನ್ನು ಬೇಡ ಜಂಗಮ ಎಂದು ನಮೂದಿಸಿರುವುದನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದೃಢಪಡಿಸಿರುತ್ತದೆ ಇದರಿಂದ ಸಾಮಾಜಿಕ ಗೊಂದಲ ಉಂಟಾಗಿದೆ.ಲಿಂಗಾಯತ ಜಂಗಮರು ವೀರಶೈವ ಲಿಂಗಾಯತ ಒಂದು ಒಳಪಂಗಡೆಯೇ ಹೊರತು ಪರಿಶಿಷ್ಟ ಜಾತಿಗೆ ಸೇರಲು ಅರ್ಹವಾದ ಬೇಡ ಜಂಗಮರಲ್ಲ ಎಂಬುದನ್ನು ಪರಿಗಣಿಸಿ ದಾವಣಗೆರೆ ಜಿಲ್ಲೆ ಮಾಯಾಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಜಂಗಮರು ಚುನಾವಣಾ ಪೂರ್ವಭಾವಿ ಪ್ರಚಾರ ನಡೆಸಿದ್ದು ತಾನು ಪರಿಶಿಷ್ಟರಿಗೆ ಮೀಸಲಾದ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತ ಸಾರ್ವಜನಿಕ ವಲಯದಲ್ಲಿ ಬಹಿರಂಗವಾಗಿ ಮೀಸಲಾತಿ ಕಬಳಿಸಿರುವ ಹುನ್ನಾರ ಹೊಂದಿರುವುದರಿಂದ ಮಾಯಾಕೊಂಡ ಮೀಸಲು ಕ್ಷೇತ್ರದಲ್ಲಿ ಇವರ ಸಂಚಾರವನ್ನು ನಿರ್ಬಂಧಿಸಿ ಕ್ರಮ ಕೈಗೊಳ್ಳುವ ಮೂಲಕ ದಾವಣಗೆರೆ ಜಿಲ್ಲಾಡಳಿತವು ಪರಿಶಿಷ್ಟರ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳನ್ನು ಸಂರಕ್ಷಿಸಬೇಕು.ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ ಮಾಡುತ್ತಿರುವ ಪೋಷಕರ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.ಪರಿಶಿಷ್ಟರನ್ನು ಶಿಕ್ಷಣ ಮತ್ತು ಉದ್ಯೋಗ ವಂಚಿತರನ್ನಾಗಿ ಮಾಡಲು ಹೊರಟಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು‌ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕುಂದುವಾಡ ಮಂಜುನಾಥ್, ಎಸ್.ಟಿ ಸೋಮಶೇಖರ್, ವೆಂಕಟೇಶ್ ಸೇರಿದಂತೆ ಅನೇಕರಿದ್ದರು.