ನಕಲಿ ಜಾತಿ ಪ್ರಮಾಣ ಪತ್ರ, ಕ್ರಮಕ್ಕೆ ಆಗ್ರಹ

(ಸಂಜೆವಾಣಿ ವಾರ್ತೆ)
ರಾಯಚೂರು,ಫೆ.೨೧- ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮತ್ತು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ತಡೆಯಬೇಕು ಎಂದು ಮಸ್ಕಿ ಉಸ್ಕಿಹಾಳ ವಾಲ್ಮೀಕಿ ಪೀಠದ ಸ್ವಾಮೀಜಿ ಆತ್ಮನಂದಸ್ವಾಮಿ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಿಂದುಳಿದ ವರ್ಗದ ೨-ಎ ದಲ್ಲಿ ಬರುವ ಕುರುಬ ಜಾತಿಯವರು ಗೊಂಡ, ಕಾಡು ಕುರುಬ, ರಾಜಗೊಂಡ ಜಾತಿಯ ಹೆಸರಿನಲ್ಲಿ ಹಾಗೂ ಪ್ರವರ್ಗ-೧ ರಲ್ಲಿ ಬರುವ ಕಬ್ಬಲಿಗ ಮತ್ತು ಗಂಗಮತಸ್ಥ ಜಾತಿಯವರು ಪರಿವಾರ ಮತ್ತು ತಳವಾರ ಹೆಸರಿನಲ್ಲಿ ಕಾನೂನು ಬಾಹೀರವಾಗಿ ಪ.ಪಂಗಡದ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮತ್ತು ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುತ್ತಾರೆ. ಅಂತಹವರ ವಿರುದ್ಧ ಪ್ರತ್ಯೇಕ ಸ್ವಾತಂತ್ರ್ಯ ತನಿಖಾ ಸಮಿತಿಯನ್ನು ರಚಿಸಿ ಅದಕ್ಕೆ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರವನ್ನು ಪ್ರದತ್ತ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು. ಈಗಾಗಲೇ ರಾಜ್ಯ ಸರಕಾರ ಪ.ಪಂಗಡಕ್ಕೆ ಘೋಷಣೆ ಮಾಡಿದ ಶೇ೭% ಮೀಸಲಾತಿಯನ್ನು ಕಾರ್ಯಾನುಷ್ಠಾನಗೊಳಿಸಬೇಕು ಮತ್ತು ೯ ಶೆಡ್ಯೂಲನಲ್ಲಿ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರುದ್ಧ ಸ್ವಯಂ ದೂರುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ವಾತಂತ್ರ್ಯವಾಗಿ ತನಿಖೆ ಮಾಡುವ ಅಧಿಕಾರವನ್ನು ಪುನ: ನೀಡಬೇಕು. ಮತ್ತು ದೂರುಗಳನ್ನು ಶೀಘ್ರವಾಗಿ ವಿಲೇವಾರಿ ಆಗಲು ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯದ ಪ್ರತಿ ತಾಲೂಕಿಗೆ ಒಂದರಂತೆ ವಸತಿ ಸಹಿತ ಏಕಲವ್ಯ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು.
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಹಾಗೂ ಯಾವುದಾದರೊಂದು ಒಂದು ವಿಮಾನ ನಿಲ್ದಾಣಕ್ಕೆ ವೀರಮದಕರಿ ನಾಯಕರ ಹೆಸರನ್ನು ನಾಮಕರಣ ಮಾಡಬೇಕು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಕುಮ್ಮಟದುರ್ಗ ಪ್ರದೇಶವನ್ನು ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ಪ್ರದೇಶವೆಂದು ಘೋಷಣೆ ಮಾಡಿ ಅದನ್ನು ಅಭಿವೃದ್ಧಿಪಡಿಸಬೇಕು.
ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯವತಿಯಿಂದ ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಸತಿ ನಿಲಯವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ವೆಂಕಟೇಶ ನಾಯಕ ಆಸ್ಥಿಹಾಳ ಅವರು ಅಬಕಾರಿ ಸರಕಾರಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಸಮಾಜದ ಏಳಿಗೆಗಾಗಿ ಇನ್ನು ೯ ವರ್ಷಗಳ ಕಾಲ ಸೇವೆ ಇದ್ದರೂ ರಾಜಿನಾಮೆಯನ್ನು ನೀಡಿ ವಾಲ್ಮೀಕಿ ಸಮಾಜದ ಅಭಿವೃದ್ಧಿಗಾಗಿ ಸಿಂಧನೂರಿನಿಂದ “ಸೈಕಲ್ ಜಾಥಾ” ಮುಖಾಂತರ ಈ ಮೇಲಿನ ಬೇಡಿಕೆಗಳನ್ನು ಇಟ್ಟುಕೊಂಡು ಸುಮಾರು ೩ ದಿನಗಳ ಕಾಲ ಪ್ರವಾಸ ಮುಗಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ.ಪ್ರತಿ ಜಿಲ್ಲೆಯಿಂದ ನಾಯಕ ಸಮುದಾಯದ ಎಲ್ಲಾ ಗಣ್ಯ ವ್ಯಕ್ತಿಗಳು ಹಾಗೂ ವಾಲ್ಮೀಕಿ ಸಮಾಜ ಸೇವಕರು ಬಂದು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ನಮ್ಮ ಜನಾಂಗದ ಮಠಾಧಿಪತಿ ಮೀಸಲಾತಿ ಕ್ಷೇತ್ರದಿಂದ ಗೆದ್ದು ಬಂದ ಜನ ಪ್ರತಿನಿಧಿಗಳು ತಿರುಗಿ ಸಹ ನೋಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.