ನಕಲಿ ಛಾಪಾ ಕಾಗದ ವಂಚನೆ ೧೧ ಮಂದಿ ಸೆರೆ

ಬೆಂಗಳೂರು,ಆ.೫- ನಿಷೇಧಿತ ಛಾಪಾ ಕಾಗದಗಳನ್ನು ಮುದ್ರಿಸಿ ಮಾರಾಟ ಮಾಡಿ ಕೊಟ್ಯಂತರ ರೂ. ಗಳ ವಂಚನೆ ಮಾಡಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಪೊಲೀಸರು ೧೧ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶ್ವನಾಥ್, ಕಾರ್ತಿಕ್, ವೆಂಕಟೇಶ್, ಶ್ಯಾಮರಾಜು, ಶಶಿಧರ, ಕರಿಯಪ್ಪ, ರವಿಶಂಕರ್, ಶಿವಶಂಕರಪ್ಪ, ಗುಣಶೇಖರ್, ರಾಘವ್ ಎನ್ ಕಿಶೋರ್ ಬಂಧಿತ ಜಾಲದ ಆರೋಪಿಗಳಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ತಿಳಿಸಿದರು.
ಬಂಧಿತ ವೆಂಟೇಶ್ ಜಾಲದ ಕಿಂಗ್‌ಪಿನ್ ಆಗಿದ್ದು, ೧೦ ಮಂದಿಯ ಜಾಲವನ್ನು ಕಟ್ಟಿಕೊಂಡು ನಿಷೇಧಿತ ಛಾಪಾ ಕಾಗದಗಳನ್ನು ನಕಲಿಯಾಗಿ ಮುದ್ರಿಸಿ ಮಾರಾಟ ಮಾಡಿ ವಂಚನೆ ನಡೆಸಲಾಗುತ್ತಿತ್ತು ಎಂದರು.
ಬಂಧಿತ ಜಾಲದಿಂದ ೫ ಲಕ್ಷ ೧೧ ಸಾವಿರ ಮೌಲ್ಯದ ೨೬೬೪ ನಕಲಿ ಸ್ಟಾಂಪ್ ಪೇಪರ್, ಕಂಪ್ಯೂಟರ್, ಪ್ರಿಂಟರ್, ವಿವಿಧ ಸರ್ಕಾರಿ ಕಚೇರಿಯ ಹೆಸರಿನ ಮುದ್ರೆಗಳು, ನಕಲಿ ಸ್ಟಾಂಪ್ ಪೇಪರ್‌ಗಳಿಗೆ ಬಳಸುವ ವಿವಿಧ ಮುದ್ರೆಗಳ ೧೧೯ ನಕಲಿ ಸೀಲುಗಳು, ಮೊಬೈಲ್‌ಗಳು, ಹಾರ್ಡ್‌ಡಿಸ್ಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಛಾಪಾ ಕಾಗದಗಳ ಮೂಲಕ ನಕಲಿಯಾಗಿ ಸೃಷ್ಟಿಸಿದ್ದ ೨೯೯೦, ೧೯೯೫, ೨೦೦೨ನೇ ಇಸವಿಗಳ ನಿವೇಶನಗಳ ನಕಲಿ ಜಿಪಿಎ ಪತ್ರ ಹಾಗೂ ೨೦೦೯ರ ಹೆಬ್ಬೆಟ್ಟು ಪಡೆದಿರುವ ದಾಖಲೆಯನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ.

ಕೇಂದ್ರ ಅಪರಾಧ ವಿಭಾಗದ ಪೊಲೀಸರು ೧೧ ಮಂದಿ ಆರೋಪಿಗಳನ್ನು ಬಂಧಿಸಿ ನಕಲಿ ಛಾಪಾಕಾಗದಗಳನ್ನು ವಶಪಡಿಸಿಕೊಂಡಿದ್ದು, ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿ ಡಾ. ಶರಣಪ್ಪ ಅವರು ಪರಿಶೀಲನೆ ನಡೆಸುತ್ತಿರುವುದು.

ಆರೋಪಿಗಳು ಒಂದು ಹಳೆಯ ಸ್ಟಾಂಪ್ ಪೇಪರನ್ನು ೫ ರಿಂದ ೮ ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಒಂದು ಪೇಪರ್‌ನ್ನು ೫ ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದರೂ ೨,೬೬೪ ಪೇಪರ್‌ಗಳಿಗೆ ಒಟ್ಟು ೧ ಕೋಟಿ ೩೩ ಲಕ್ಷ ೨೦ ಸಾವಿರ ಮೌಲ್ಯವಾಗಲಿದೆ ಎಂದು ತಿಳಿಸಿದರು.
ಆರೋಪಿಗಳು ಹಲಸೂರು ಗೇಟ್‌ನ ಕಂದಾಯ ಭವನದ ಆವರಣದ ಟೈಪಿಂಗ್ ಪೋಲ್‌ನಲ್ಲಿರುವ ಕೆಲವು ಸ್ಟಾಲ್‌ಗಳಲ್ಲಿ ನಿಷೇಧಿತ ಛಾಪಾ ಕಾಗದಗಳನ್ನು ಅದಕ್ಕೆ ಬೇಕಾದ ಇಸವಿಯ ವಿವಿಧ ಮುಖಬೆಲೆಯ ಸ್ಟಾಂಪ್ ಪೇಪರ್‌ಗಳನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದ ಡಿಸಿಪಿ ಡಾ. ಶರಣಪ್ಪ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಜಾಲವನ್ನು ಪತ್ತೆ ಹಚ್ಚಿ ಬಂಧಿಸಿದೆ ಎಂದರು.ಆರೋಪಿಗಳು ನಿಷೇಧಿತ ಸ್ಟಾಂಪ್ ಪೇಪರ್‌ಗಳನ್ನು ಅವರಿಗೆ ಬೇಕಾದ ದಿನಾಂಕ ಹಾಗೂ ಬೆಲೆಗೆ ತಕ್ಕಂತೆ ನಕಲಿಯಾಗಿ ಮುದ್ರಿಸಿ ನಕಲಿ ಸೀಲ್‌ಗಳನ್ನು ಹಾಕಿ ಹಲವಾರು ವರ್ಷಗಳ ಹಿಂದಿನ ಫ್ರಾಂಕಿಂಗ್ ಪೇಪರ್‌ಗಳನ್ನು ಸೃಷ್ಟಿಸುವ ವ್ಯವಸ್ಥಿತ ಜಾಲವನ್ನು ಹೊಂದಿದ್ದರು.
ಹಲವು ವರ್ಷಗಳಿಂದ ಬ್ರೋಕರ್‌ಗಳ ಮೂಲಕ ಹೆಚ್ಚಿನ ಬೆಲೆಗೆ ನಕಲಿ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದು, ಇವರುಗಳಿಂದ ಖರೀದಿ ಮಾಡಿದ ಬ್ರೋಕರ್‌ಗಳು ನಕಲಿ ಸ್ಟಾಂಪ್ ಪೇಪರ್ ಬಳಸಿ ನಿಷೇಧಕ್ಕೂ ಹಿಂದಿನ ದಿನಾಂಕಕ್ಕೆ ಮೊದಲೇ ಇದ್ದಂತೆ ನಕಲಿಯಾಗಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಆಸ್ತಿಯ ನಕಲಿ ದಾಖಲಾತಿಗಳನ್ನು ನೈಜವೆಂದು ಹಾಜರುಪಡಿಸಿ ಸರ್ಕಾರದ ವಿವಿಧ ಇಲಾಖೆಗಳಿಗೆ ಹಾಗೂ ನ್ಯಾಯಾಲಯಗಳಿಗೆ ಸಲ್ಲಿಸಿ ಅಕ್ರಮ ಹಣ ಸಂಪಾದನೆ ಮಾಡಲಾಗುತ್ತಿತ್ತು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಶರಣಪ್ಪ ಅವರಿದ್ದರು.