ನಕಲಿ ಚಿನ್ನಾಭರಣ ಹೆಸರಲ್ಲಿ ಪಂಗನಾಮ; ೩ ಖದೀಮರ ಸೆರೆ

ಬೆಂಗಳೂರು, ನ.೨೩-ನಕಲಿ ಚಿನ್ನಾಭರಣಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಡಮಾನ ಮಾಡಿ ಕೋಟ್ಯಂತರ ರೂ ಹಣವನ್ನು ಸಾಲವಾಗಿ ಪಡೆದುಕೊಂಡು ಬ್ಯಾಂಕುಗಳಿಗೆ ಮೋಸ ಮಾಡಿರುವ ಮೂವರು ಖತರ್ನಾಕ್ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅರುಣ್ ರಾಜು ಕಾನಡೆ(೩೦) ಸತ್ಯಾನಂದ (೨೮) ದತ್ತಾತ್ರೇಯ ಬಾಕಳೆ ಅಲಿಯಾಸ್ ಯಶ್(೨೮)ಬಂಧಿತ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿರುವ ಮಹಿಳೆಯೊಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.ಆರೋಪಿಗಳು ೧೫ ಕೆ.ಜಿ ಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡಮಾಡಿ ಕೋಟ್ಯಂತರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡು ವಾಪಸ್ ಕಟ್ಟದೇ ಬ್ಯಾಂಕುಗಳಿಗೆ ಮೋಸ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಕಳೆದ ಸೆಪ್ಟಂಬರ್ ೨೩ರ ಮದ್ಯಾಹ್ನ ೧೨-೩೦ ಗಂಟೆ ಸಮಯದಲ್ಲಿ ವಿಜಯನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಆರೋಪಿ ಅರುಣ್ ರಾಜು ಕಾನಡೆ ಮತ್ತೊಬ್ಬ ಆರೋಪಿ ಸತ್ಯಾನಂದ ತಲೆಮರೆಸಿಕೊಂಡಿರುವ ಜಯಲಕ್ಷ್ಮೀ ಸೇರಿ ಮೂವರು ೨೩೫.೬ ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದು ಆರೋಪಿತೆ ಜಯಲಕ್ಷ್ಮೀ ರವರ ಹೆಸರಿನಲ್ಲಿ ಅಡಮಾನ ಮಾಡಿ ೭ ಲಕ್ಷ ೧೫ ಸಾವಿರ ರೂಗಳನ್ನು ಸಾಲವಾಗಿ ಪಡೆದುಕೊಂಡು ಮೋಸ ಮಾಡಲು ಪ್ರಯತ್ನಿಸಿದಾಗ ಬ್ಯಾಂಕ್ ಅಪ್ರೈಸರ್ ಮತ್ತು ಮ್ಯಾನೇಜರ್ ರವರಿಗೆ ಅನುಮಾನ ಬಂದು ಸದರಿ ನಕಲಿ ಚಿನ್ನಾಭರಣಗಳನ್ನು ಪರೀಕ್ಷೆಗೆ ಒಳಪಡಿಸಿ ನಕಲಿ ಚಿನ್ನಾಭರಣಗಳೆಂದು ಖಚಿತಪಡಿಸಿಕೊಂಡು ಬ್ಯಾಂಕ್ ಮ್ಯಾನೇಜರ್ ಮಹೇಶ್ ಸಿ ಹೂಗಾರ್ ರವರು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ
ಆರೋಪಿಗಳು ತಾಮ್ರದ ಮೇಲೆ ಚಿನ್ನವನ್ನು ಲೇಪನ ಮಾಡಿ ಹಾಲ್‌ಮಾರ್ಕ್ ಗುರುತನ್ನು ಮುದ್ರಿಸಿರುವ ನಕಲಿ ಚಿನ್ನಾಭರಣಗಳನ್ನು ಪಶ್ಚಿಮ ಬಂಗಾಳದ ಮೂಲದಿಂದ ಕೊರಿಯರ್ ಮುಖಾಂತರ ತರಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಡಮಾನ ಮಾಡಿ ಸಾಲವನ್ನು ಪಡೆದುಕೊಂಡು ವಾಪಸ್ ಕಟ್ಟದೇ ವಂಚಿಸುತ್ತಿದ್ದರು.ಆರೋಪಿಗಳು ಗುಜರಾತ್ ರಾಜ್ಯದ ಸೂರತ್ ಬೆಂಗಳೂರು, ಉಡುಪಿ, ಗದಗ, ಕೊಪ್ಪಳ, ಹುಬ್ಬಳ್ಳಿ ಜಿಲ್ಲೆಗಳಲ್ಲಿನ ವಿವಿಧ ರಾಷ್ಟ್ರೀಕೃತಬ್ಯಾಂಕುಗಳಲ್ಲಿ ಸುಮಾರು ೧೫ ಕೆ.ಜಿ ಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡಮಾಡಿ ಕೋಟ್ಯಂತರ ರೂಗಳನ್ನು ಸಾಲವಾಗಿ ಪಡೆದುಕೊಂಡು ವಾಪಸ್ ಕಟ್ಟದೇ ಬ್ಯಾಂಕುಗಳಿಗೆ ಮೋಸ ಮಾಡಿರುತ್ತಾರೆ,ಇದುವರೆವಿಗೂ ೧೪೭೫.೬೪೦ ಗ್ರಾಂ ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಆರೋಪಿತರುಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಮಾಹಿತಿಯನ್ನು ನೀಡಿ ತನಿಖೆಯನ್ನು ಕೈಗೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ವಿಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ರವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಸಿಬ್ಬಂದಿ ಕೈಗೊಂಡಿದ್ದು ಉತ್ತಮ ಕೆಲಸ ಮಾಡಿದ ತಂಡವನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ ಎಂದು ಹೇಳಿದರು.