ನಕಲಿ ಗೊಬ್ಬರ ಮಾರಾಟ: ಬೀಗ ಜಡಿದ ಅಧಿಕಾರಿಗಳು

ಬಸವಕಲ್ಯಾಣ:ಜೂ.3: ತಾಲ್ಲೂಕಿನ ಯಲ್ಲದಗುಂಡಿ ಗ್ರಾಮದಲ್ಲಿ ಡಿಎಪಿ ಹೆಸರಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಗೋದಾಮಿಗೆ ಕೃಷಿ ಇಲಾಖೆ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಪ್ಸ್ ನ್ನು ಡಿಎಪಿ ಹೆಸರಲ್ಲಿ ಮಾರಾಟ ಮಾಡುತ್ತಿದ್ದ ಕಾರಣ ರೈತರು ಮೋಸ ಹೋಗುತ್ತಿದ್ದರು. ಈ ಬಗ್ಗೆ ಗೊತ್ತಾಗಿದ್ದರಿಂದ ಕೃಷಿ ಇಲಾಖೆ
ಜಾರಿ ದಳದ ಮುಖ್ಯಸ್ಥ ಎಂ.ಕೆ. ಅನ್ಸಾರಿ, ವಿಷಯ ತಜ್ಞ ಮಾರ್ತಾಂಡ, ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ದಿಢೀರ್‌ ದಾಳಿ ನಡೆಸಿ ಗೋದಾಮಿಗೆ ಬೀಗ ಹಾಕಿದ್ದಾರೆ.

‘ಗೋದಾಮಿನಲ್ಲಿ 420 ಚೀಲ ರಸಗೊಬ್ಬರ ಇತ್ತು. ಮಾರಾಟಗಾರ ಉಮೇಶ ಎಂಬುವವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ’
ಎಂದು ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಶರಣು ಸಲಗರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.ಮಂಠಾಳ ಕೃಷಿ ಅಧಿಕಾರಿ ಶ್ರೀಶೈಲ್, ಕೃಷ್ಣಾ ಪಾಟೀಲ, ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ತಾಟೆ, ಅಶೋಕ ವಕಾರೆ, ಸಿದ್ರಾಮ ಕಾಮಣ್ಣ, ಸದಾನಂದ ಪಾಟೀಲ, ಭೀಮಾ ತಾಟೆ, ಗಣೇಶ ಉಪಸ್ಥಿತರಿದ್ದರು.