ನಕಲಿ ಗುರುತಿನ ಚೀಟಿ ಪ್ರಕರಣ: ಐಪಿಎಸ್ ಅಧಿಕಾರಿ ನೇಮಕಕ್ಕೆ ಕೋರ್ಟ್ ನಿರ್ದೇಶನ

ಬೆಂಗಳೂರು, ನ.11- ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದ 2018ರ ಸಾರ್ವತ್ರಿಕ ಚುನಾವಣೆ ವೇಳೆ ಪತ್ತೆಯಾಗಿದ್ದ ನಕಲಿ ಗುರುತಿನ ಚೀಟಿ ಪ್ರಕರಣ ಸಂಬಂಧ ಪೊಲೀಸರು ನಡೆಸಿರುವ ತನಿಖೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ಹಿರಿಯ ಐಪಿಎಸ್ ಅಧಿಕಾರಿ ಒಬ್ಬರನ್ನು ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಿದೆ.

ಈ ಗಂಭೀರ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಕೋರಿ ಎನ್.ಆನಂದ್ ಕುಮಾರ್ ಹಾಗೂ ಜಿ. ಸಂತೋಷ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ಮಾಜಿ ಅಡ್ವಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, ಆರ್. ಆರ್. ನಗರದಲ್ಲಿ ಪತ್ತೆಯಾಗಿದ್ದ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣವನ್ನು ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ಪ್ರತ್ಯಕ್ಷ್ಯ ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸಿಲ್ಲ.

ಜತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿಲ್ಲ. ದಕ್ಷವಾಗಿ ಹಾಗೂ ಪ್ರಾಮಾಣಿಕವಾಗಿ ತನಿಖೆ ನಡೆಸಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತನಿಖೆ ಸೂಕ್ತ ರೀತಿಯಲ್ಲಿ ನಡೆದಿದೆಯೇ, ಇಲ್ಲವೇ ಎಂಬುದನ್ನು ನಾವೇ ನಿರ್ಧರಿಸುವುದು ಕಷ್ಟ.
ಹಾಗಾಗಿ, ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆಯನ್ನು ಪರಿಶೀಲಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಿರಿಯ ಐಪಿಎಸ್ ಅಧಿಕಾರಿ ಒಬ್ಬರನ್ನು ನೇಮಿಸಬೇಕು.

ಅವರು ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಜತೆಗೆ, ತನಿಖೆ ನಡೆಸಬೇಕಿರುವ ಅಂಶಗಳನ್ನು ಗುರುತಿಸಬೇಕು. ಈ ವರದಿಯನ್ನು ಡಿ.15
ರೊಳಗೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು.